ಧಾರವಾಡ : ಧಾರವಾಡದ ಕುಮಾರೇಶ್ವರ ನಗರದ ನಿರ್ಮಾಣ ಹಂತದ ಬಹು ಮಹಡಿ ಕಟ್ಟಡ ದುರಂತಗೊಂಡು 19 ಜನ ಸಾವನ್ನಪ್ಪಿದ್ದು, 54 ಜನ ಗಂಭೀರ ಸ್ವರೂಪದ ಗಾಯಾಳುಗಳಾಗಿದ್ದಾರೆ. ಹೀಗಾಗಿ ಕೂಡಲೇ ಕಟ್ಟಡ ಮಾಲೀಕರ ಆಸ್ತಿ ಮುಟ್ಟುಗೋಲು ಹಾಕಿ ಸಂತ್ರಸ್ತ್ರರಿಗೆ ಪರಿಹಾರ ನೀಡಬೇಕು ಎಂದು ಬಿಜೆಪಿ ಶಾಸಕ ಅಮೃತ ದೇಸಾಯಿ ಒತ್ತಾಯಿಸಿದ್ದಾರೆ.
ಅವರು ಸೋಮವಾರ ಸಂಜೆ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹುಮಹಡಿ ಕಟ್ಟಡ ಕುಸಿತದಿಂದಾಗಿ ಬಡ ಕೂಲಿ ಕಾರ್ಮಿಕರು ಬಲಿಯಾಗಿದ್ದಾರೆ. ಅನೇಕರ ಕುಟುಂಬಗಳಿಗೆ ಆಸರೆ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅನೇಕರು ತಮ್ಮ ಉಪಜೀವನಕ್ಕಾಗಿ ಸಾಲ ಮಾಡಿ ಅಂಗಡಿ ಖರೀದಿಸಿದ್ದರು. ಇನ್ನೂ ಕೆಲವರು ಕಟ್ಟಡದಲ್ಲಿ ಅಂಗಡಿ ಬಾಡಿಗೆ ಪಡೆದಿದ್ದರು. ಒಟ್ಟು 20ಕ್ಕೂ ಮಳಿಗೆ ನಡೆಯುತ್ತಿದ್ದವು.
ಬಾಡಿಗೆ ಅಂಗಡಿ ಪಡೆದ ಮಾಲಿಕರಿಗೆ ಅಂಗಡಿಯಲ್ಲಿ ಹೂಡಿಕೆ ಮಾಡಿದ ಲಕ್ಷಾಂತರ ರೂಪಾಯಿ ಪರಿಹಾರ ಮತ್ತು ಅಂಗಡಿ ಖರೀದಿ ಮಾಡಿದವರಿಗೆ ಪೂರ್ಣ ಹಣ ವಾಪಸ್ ಜೊತೆಗೆ ಮಳಿಗೆಯಲ್ಲಿ ಹೂಡಿಕೆ ಮಾಡಿದ ಹಣ ಹಿಂತಿರುಗಿಸಲು ಕ್ರಮ ಜರುಗಿಸಬೇಕು ಎಂದರು.
ಕೆಲವು ನಿವೃತ್ತರು ತಮ್ಮ ನಿವೃತ್ತಿನಂತರದ ಜೀವನಕ್ಕಾಗಿ ದೊರೆತ ಹಣವನ್ನು ಹೂಡಿಕೆ ಮಾಡಿ ಅಂಗಡಿ ತೆರೆದಿದ್ದು, ಆಶೀಶ್ ಹಿರೇಮಠ, ಮಹೇಶ್ವರಯ್ಯ ಹಿರೇಮಠ ತಂದೆ ಮಗ ಇಬ್ಬರೂ ಮೃತರಾಗಿದ್ದು, ಕುಟುಂಬದಲ್ಲಿ ದುಡಿಯಲು ಗಂಡಸರೇ ಇಲ್ಲದಂತಾಗಿರುವುದು ವಿಷಾದದ ಸಂಗತಿಯಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸರ್ಕಾರವು ಸೂಕ್ತ ತನಿಖೆ ಮಾಡಿ ಕಳಪೆ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಕಟ್ಟಡ ಮಾಲೀಕರು ಹಾಗೂ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮೃತರ ಕುಟುಂಬಗಳ ಜೀವನೋಪಾಯಕ್ಕೆ ತಲಾ ರೂ. ೧೦ ಲಕ್ಷ ಪರಿಹಾರವನ್ನೂ ಹಾಗೂ ಗಾಯಾಳುಗಳಿಗೆ ರೂ. ೨ ರಿಂದ ೫ ಲಕ್ಷ ಮೊತ್ತದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ದುರಂತ ಸಂಭವಿಸಿ ಒಂದು ವಾರ ಕಳೆದರೂ ಈವರೆಗೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ. ಆದಷ್ಟು ಬೇಗನೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಈ ಬಗ್ಗೆ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಅಮೃತ ದೇಸಾಯಿ ತಿಳಿಸಿದರು.
ಶೀಘ್ರವೇ ಸಂತ್ರಸ್ತರ ಕುಟುಂಬಗಳಿಗೆ ತೆರಳಿ ಅವರ ಅಹವಾಲು ಆಲಿಸಿ, ಆನಂತರ ಎಲ್ಲ ಸಂತ್ರಸ್ತ್ರರ ಸಭೆ ಕರೆದು ಅವರ ಕುಟುಂಬದ ಹಾನಿ ಬಗ್ಗೆ ಚರ್ಚಿಸಿ ಮುಂದಿನ ಹೋರಾಟದ ರೂಪರೇಷೆಗಳನ್ನು ನಿರ್ಧರಿಸುವುದು. ಕಾನೂನು ಹೋರಾಟ ನಡೆಸಲಾಗುವುದು ಎಂದು ಅಮೃತ ದೇಸಾಯಿ ತಿಳಿಸಿದರು.
ಈ ಪ್ರಕರಣವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯವರಿಂದ ತನಿಖೆಗೆ ಒಳಪಡಿಸಲೇಬೇಕು. ದಂಡಾಧಿಕಾರಿಗಳ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ ಎಂದರು.
ಸಾವಿನಲ್ಲೂ ರಾಜಕೀಯ ಬೆರೆಸುವುದು ಸರಿಯಲ್ಲ. ಕಟ್ಟಡ ಮಾಲೀಕರು ಬಿಜೆಪಿಯವರೋ ಕಾಂಗ್ರೆಸ್ ನವರೋ ಎಂಬುದು ಬೇಡ. ಯಾರೇ ಇರಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಶಾಸಕ ಅಮೃತ ದೇಸಾಯಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಂಗನಗೌಡ ರಾಮನಗೌಡರ, ನಾಗರಾಜ ಗಾಣಗೇರ, ಶರಣು ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.