ಧಾರವಾಡ prajakiran.com : ಧಾರವಾಡದ ಸುಭಾಸ ರಸ್ತೆಯ ಕೆಸಿಸಿ ಬ್ಯಾಂಕ್ ಪಕ್ಕದ ಹೋಟೆಲ್ ಎದುರು ಪತ್ತೆಯಾದ ವ್ಯಕ್ತಿಯ ಶವ ಶುಕ್ರವಾರ ಕೆಲ ಕಾಲ ಸ್ಥಳೀಯರಿಗೆ ಭಯ ಹುಟ್ಟಿಸಿತ್ತು.
ಸುಮಾರು ೪೫ ವರ್ಷದ ವ್ಯಕ್ತಿ ಬೆಳ್ಳಂ ಬೆಳಗ್ಗೆ ಹೋಟೆಲ್ ಮುಂದೆ ಶವವಾಗಿ ಪತ್ತೆಯಾಗಿದ್ದ. ಬೆಳಗ್ಗೆ ಅಂಗಡಿ ಮಾಲೀಕ ಬಂದಾಗ ಈ ಮಾಹಿತಿ ತಿಳಿದು ಬೆಚ್ಚಿಬಿದ್ದಿದ್ದ.
ತಕ್ಷಣ ಸ್ಥಳೀಯರು ಅಕ್ಕ ಪಕ್ಕದ ಅಂಗಡಿಯವರು ಕೂಡಲೇ ಜಿಲ್ಲಾಡಳಿತದ ಕಂಟ್ರೋಲ್ ರೂಂ.ಗೆ, ೧೦೮ ಸಿಬ್ಬಂದಿಗೆ ಸಹ ಮಾಹಿತಿ ನೀಡಿದ್ದರು.
ಆನಂತರ ಸ್ಥಳಕ್ಕೆ ಬಂದಅಂಬುಲೈನ್ಸ್ ಸಿಬ್ಬಂದಿ ಶವ ಸಾಗಿಸಲು ಪಿಪಿಇ ಕಿಟ್ ಇಲ್ಲದ ಹಿನ್ನೆಲೆಯಲ್ಲಿ ನಿರಾಕರಣೆ ಮಾಡಿದರು.
ಆನಂತರ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪೊಲೀಸರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮೃತಪಟ್ಟ ವ್ಯಕ್ತಿಯ ಮೂಗಿನಿಂದ ರಕ್ತಸ್ರಾವ ಆಗಿದ್ದರಿಂದ , ಶವ ಸಾಗಿಸಲು ಹಿಂದೇಟು ಹಾಕಿದರು.
ಆ ಬಳಿಕ ಬಸ್ತಿ ಓಣಿ ನಿವಾಸಿ ಕುಡಿತದ ದಾಸನಾಗಿ ಸಾವನ್ನಪ್ಪಿರುವುದು ದೃಢಪಟ್ಟಿತ್ತು. ಸಾವನ್ನಪ್ಪಿದವನನ್ನು ರಫೀಕ್ ಎಂದು ಗುರುತಿಸಲಾಯಿತು.
ಆದರೆ ಸಾವಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ವೃತ್ತಿಯಿಂದ ಈತ ಬಡಿಗೆತನ ಮಾಡುತ್ತಿದ್ದ.
ಸ್ಥಳಕ್ಕೆ ದೌಡಾಯಿಸಿದ ಆತನ ಕುಟುಂಬಸ್ಥರು ರಫೀಕನ ಶವ ಕಂಡು ಗೋಳಾಡಿದರು.
ಆನಂತರ ಆತನ ಸಂಬಂಧಿಕರು ಶವವನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಬಳಿಕ ತೆಗೆದುಕೊಂಡು ಹೋದರು. ಈ ಕುರಿತು ಧಾರವಾಡ ಶಹರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.