ಉತ್ತರ ಕನ್ನಡ : ಬಟ್ಟೆ ಒಗೆಯಲು ನದಿಗೆ ಹೋಗಿದ್ದ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಹಳಿಯಾಳ ತಾಲೂಕಿನ ಬೊಮ್ನಳ್ಳಿ ಗ್ರಾಮದ ಕಾಳಿನದಿಯಲ್ಲಿ ಈ ದುರಂತ ನಡೆದಿದ್ದು, ಇಂದು ಸಂಜೆ ವೇಳೆ ಕಾಳಿ ನದಿ ಬಳಿ ಬಟ್ಟೆ ಒಗೆಯಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಕ್ಕಳು ನದಿ ನೀರಿನಲ್ಲಿ ಆಟವಾಡುವಾಗ ಕೊಚ್ಚಿಕೊಂಡು ಹೋಗಿದ್ದನ್ನು ಕಂಡು ಕಕ್ಕಾಬಿಕ್ಕಿಯಾದ ತಂದೆ ತಾಯಿ ಇಬ್ಬರು ಮಕ್ಕಳ ರಕ್ಷಣೆಗಾಗಿ ನದಿಗೆ ದುಮುಕಿದ್ದಾರೆ. ಆಗ ತಾಯಿಯನ್ನು ಮಾತ್ರ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಮೃತರನ್ನು ಧೂಳು ಗಾವಡೆ(೪೮), ಕೃಷ್ಣಾ ಧೂಳು ಗಾವಡೆ(೬), ಗಾಯತ್ರಿ ಧೂಳು ಗಾವಡೆ(೯) ಹಾಗೂ ಸತೀಶ್ ಬೀರು ಗಾವಡೆ(೭) ಎಂದು ಗುರುತಿಸಲಾಗಿದೆ. ನೀರಿನಲ್ಲಿ ಮುಳುಗಿದ್ದ ರಾಮಿ ಬಾಯಿ ಎಂಬುವರು ಬದುಕಿದ್ದಾರೆ.
ಇನ್ನು ನೀರಿನಲ್ಲಿ ಮುಳುಗಡೆಯಾಗಿದ್ದ ಗಾಯತ್ರಿ ಧೂಳು ಗಾವರ್ಡೆ (9) ಶವ ಪತ್ತೆ ಯಾಗಿದ್ದು ನದಿಯಿಂದ ಹೊರ ತರಲಾಗಿದೆ. ಈ ಕುರಿತು ಅಂಬಿಕಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.