ಬೆಂಗಳೂರು : ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆಗೊಳಿಸಿರುವ ಗಾಲಿ ಜನಾರ್ಧನರಡ್ಡಿ ನಾನೂ ಎಲ್ಲಿಯೂ ಓಡಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಸಿಸಿಬಿ ಪೊಲೀಸರ ನಡೆ ರಾಜಕೀಯ ಪ್ರೇರಿತವಾಗಿದ್ದು, ಅವರು ಯಾವುದೇ ಪಕ್ಷಪಾತ ಮಾಡದೆ, ತನಿಖೆ ನಡೆಸಿದರೆ, ನಾನು ಅದಕ್ಕೆ ಸಂಪೂರ್ಣ ಸಹಕಾರ ನೀಡಲು ಸಿದ್ದ ಎಂದು ಘೋಷಿಸಿದ್ದಾರೆ.
ಅಲ್ಲದೆ, ನಾನು ಬೆಂಗಳೂರು ಮಹಾನಗರ ಬಿಟ್ಟು ಎಲ್ಲಿಯೂ ಹೋಗಿಲ್ಲ. ಸಿಸಿಬಿ ಪೊಲೀಸರು ಸುಮ್ಮನೇ ಮಾಧ್ಯಮಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ವಿರುದ್ದ ಒಂದೇ ಒಂದು ಸಣ್ಣ ಸಾಕ್ಷ್ಯ ಇದ್ದರೂ ಕೂಡ ನೀಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಗಾಲಿ ಜನಾರ್ಧನರಡ್ಡಿ ದಿವಾಳಿ ಆಗಿಲ್ಲ. ಇನ್ನೂ ಭಗವಂತ ಸಾಕಷ್ಟು ಶಕ್ತಿ ಕೊಟ್ಟಿದ್ದು, ಹತ್ತು ಜನರಿಗೆ ಸಹಾಯ ಮಾಡುವ ಕೈ ಇದೆಯೇ ಹೊರತು ಯಾರೊಂದಿಗೆ ಡೀಲ್ ಮಾಡುವ ಅಗತ್ಯವಿಲ್ಲ ಎನ್ನುವ ಮೂಲಕ ಆಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಸಿಸಿಬಿ ನಿನ್ನೇಯಷ್ಟೇ ನನಗೆ ನೋಟಿಸ್ ನೀಡಿದೆ ಅದರ ಹಿನ್ನಲೇಯಲ್ಲಿ ಅವರು ಭಾನುವಾರ ವಿಚಾರಣೆಗೆ ಬರಲು ಹೇಳಿದ್ದಾರೆ. ಆದರೆ ನಾನು ಒಂದು ದಿನ ಮುಂಚಿತವಾಗಿ ಅಂದರೆ ಇಂದು ಶನಿವಾರವೇ ಹಾಜರಾಗಿತ್ತೇನೆ ಎಂದು ವಿಡಿಯೋದಲ್ಲಿ ಗಾಲಿ ಜನಾರ್ಧನರಡ್ಡಿ ಸ್ಪಷ್ಟಪಡಿಸಿದ್ದಾರೆ.
ಈ ವಿಡಿಯೋದಲ್ಲಿ ವಕೀಲ ಚಂದ್ರಶೇಖರ ಸಹ ಇರುವುದು ವಿಶೇಷವಾಗಿದ್ದು, ಇದೀಗ ಸಿಸಿಬಿ ಪೊಲೀಸರ ನಡೆ ತೀವ್ರ ಕುತೂಹಲ ಕೆರಳಿಸಿದೆ.