ಬೆಂಗಳೂರು : ಆಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜರ್ನಾಧನರಡ್ಡಿ ಇದೀಗ ಸಿಸಿಬಿ ವಿರುದ್ದವೇ ಹೈಕೋರ್ಟ್ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಅಚ್ಚರಿಯ ಬೆಳವಣಿಗೆಯಾದರೂ, ರಡ್ಡಿ ಪರ ವಕೀಲರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ಸಿಸಿಬಿ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿ ರಡ್ಡಿ ವಕೀಲರು ಹೈಕೋರ್ಟ್ ನಲ್ಲಿ ಸಮರ ಸಾರಿದ್ದಾರೆ.
ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಫರೀದ್ ಗೆ ನ್ಯಾಯಾಲಯ ಜಾಮೀನು ನೀಡಿದೆ. ಅದೇ ರೀತಿ ರಡ್ಡಿ ಆಪ್ತ ಅಲಿಖಾನ್ ಗೂ ಜಾಮೀನು ಸಿಕ್ಕಿದೆ.
ಈಗ ಪ್ರಕರಣದ ಮೂರನೇ ಆರೋಪಿ ಎಂದು ಬಿಂಬಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಬಂಧನಕ್ಕೆ ಪೊಲೀಸರು ತರಾತುರಿ ನಡೆಸುತ್ತಿರುವುದು, ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ದಿಢೀರ್ ದಾಳಿ ನಡೆಸುತ್ತಿರುವುದು ನೋಡಿದರೆ ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ರಾಜಕೀಯ ಪಿತೂರಿ ಕಾಣುತ್ತಿದೆ ಎಂದು ರಡ್ಡಿ ಪರ ವಕೀಲ ಚಂದ್ರಶೇಖರ್ ಆರೋಪಿಸಿದ್ದಾರೆ.
ಹೀಗಾಗಿ ನಾವು ಮಾನ್ಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಹೈಕೋರ್ಟ್ ಮೇಲೆ ನಮ್ಮ ಕಕ್ಷಿದಾರರಿಗೆ ಸಂಪೂರ್ಣ ಭರವಸೆಯಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳ ವಿರುದ್ದ ಅರ್ಜಿ ಸಲ್ಲಿಸಿದ್ದೇವೆ ಎಂದರು.
ಇದೇ ವೇಳೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಗಾಲಿ ಜನಾರ್ಧನರಡ್ಡಿ ಅವರಿಗೆ ನಿರೀಕ್ಷಣಾ ಜಾಮೀನು ಕೋರಿ ಕೂಡ ಅರ್ಜಿ ಸಲ್ಲಿಸಲಾಗಿದೆ ಎಂದು ಚಂದ್ರಶೇಖರ ವಿವರಿಸಿದರು.