ಬೆಂಗಳೂರು : ಸಾಲ ವಸೂಲಾತಿಗೆ ಕೋರ್ಟ್ ಮೊರೆ ಹೋಗಿರುವ ಆಕ್ಸಿಸ್ ಬ್ಯಾಂಕ್ ವಿರುದ್ದ ಸೋಮವಾರ ರಾಜ್ಯಾದ್ಯಂತ ಸಾವಿರಾರು ರೈತರು ಬೀದಿಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿರುವ ಬ್ಯಾಂಕ್ ಕ್ರಮ ಖಂಡಿಸಿದ ರೈತರು ಕೂಡಲೇ ಆಕ್ಸಿಸ್ ಬ್ಯಾಂಕ್ ರಾಜ್ಯದಿಂದ ತೊಲಗಲಿ ಎಂದು ಬ್ಯಾಂಕ್ ಗೆ ಮುತ್ತಿಗೆ ಹಾಕಿ, ಶೆಟರ್ ಎಳೆದು, ಕೆಲವಡೆ ಬೀಗ ಜಡಿಯಲು ಪ್ರಯತ್ನಿಸಿದರು.
ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು 20ಕ್ಕೂ ಹೆಚ್ಚು ರೈತರನ್ನು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಹಲವಡೆ ನಡೆದಿವೆ.
ಚಾಮರಾಜನಗರ, ದಾವಣಗೆರೆ, ಮಂಡ್ಯ, ಬೆಳಗಾವಿ, ಕೋಲಾರ, ಶಿವಮೊಗ್ಗ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಬ್ಯಾಂಕ್ ವಿರುದ್ದ ಕಿಡಿ ಕಾರಿದರು.
ಬೈಲ್ ಹೊಂಗಲದಲ್ಲಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಬ್ಯಾಂಕ್ ಧೋರಣೆಯನ್ನು ಖಂಡಿಸಿದರು.ಈ ವೇಳೆ ಬ್ಯಾಂಕ್ ಮ್ಯಾನೇಜರ್ ರಾಜಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು, ಕೂಡಲೇ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ರೈತರು ಸೇರಿದಂತೆ 140 ರೈತರ ಮೇಲೆ ದಾಖಲಿಸಿರುವ ಪ್ರಕರಣ ಕೈಬಿಡುವಂತೆ ಆಗ್ರಹಿಸಿದರು.
ಅಲ್ಲದೆ, ಸ್ಥಳೀಯ ರೈತರ ಸಮಸ್ಯೆ ಕುರಿತು ತಹಸೀಲ್ದಾರ್, ಪೊಲೀಸ್ ಸಮ್ಮುಖದಲ್ಲಿ ನ.13ರಂದು ಚರ್ಚಿಸಿ, ಬಡ್ಡಿ ಮನ್ನಾ, ಒಂದೇ ಸಲ ಸಾಲಮರುಪಾವತಿಸಲು ಸಹ ಅನುಕೂಲ ಮಾಡಿಕೊಡ್ತಿವಿ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಬ್ಯಾಂಕ್ ಮ್ಯಾನೇಜರ್ ರಾಜಕುಮಾರ, ಈಗಾಗಲೇ ಬ್ಯಾಂಕ್ ಮೇಲಾಧಿಕಾರಿಗಳು ಪ್ರಕರಣ ವಾಪಾಸ್ಸು ಪಡೆಯುವ ಭರವಸೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಕೋರ್ಟ್ ರಜೆ ಮುಗಿದ ಬಳಿಕ ಪ್ರಕರಣ ವಾಪಾಸ್ ಪಡೆಯಲು ನಿರ್ಧರಿಸಿದೆ ಎಂದರು.