ಬಿಳಿಗಿರಿ ಶ್ರೀನಿವಾಸ
ಚಾಮರಾಜನಗರ Prajakiran.com : ಹಣಕಾಸಿನ ವ್ಯವಹಾರದಲ್ಲಿ ವಿವಾದ ಉಂಟಾಗಿ ಪತ್ನಿ, ತನ್ನ ಅಣ್ಣನ ಜೊತೆ ಸೇರಿ ಎರಡನೇ ಗಂಡನನ್ನೇ ಅಪಹರಿಸಿ ಚಿತ್ರಹಿಂಸೆ ನೀಡಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮುಡಿಗುಂಡಂನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ರಶ್ಮಿ ತನ್ನ ಮೊದಲ ಗಂಡನನ್ನು ಬಿಟ್ಟಿದ್ದಳು. ಬೆಂಗಳೂರಿನಲ್ಲಿ ಬ್ಯಾಂಕ್ ವೊಂದರಲ್ಲಿ ಮ್ಯಾನೇಜರ್ ಆಗಿದ್ದ ಕೊಳ್ಳೇಗಾಲದ ಮುಡಿಗುಂಡಂನ ಸುಬ್ರಹ್ಮಣ್ಯ ನನ್ನು ಪ್ರೀತಿಸಿ ನಾಲ್ಕು ವರ್ಷದಿಂದ ಒಟ್ಟಿಗೆ ಐಶಾರಾಮಿಯಾಗಿ ಜೀವಿಸುತ್ತಿದ್ದರು.
ಆದರೆ ಕಳೆದ ಒಂದು ವರ್ಷದ ಹಿಂದೆ ಸುಬ್ರಹ್ಮಣ್ಯ ನನ್ನು ತೊರೆದ ರಶ್ಮಿ ಮೊದಲ ಗಂಡನ ಜೊತೆ ಸೇರಿಕೊಂಡಿದ್ದಳು. ಜೊತೆಯಲ್ಲಿದ್ದಾಗ ತನ್ನ ಬಳಿ ಇದ್ದ ೫೯ ಲಕ್ಷ ಹಣ ಪಡೆದಿದ್ದು, ಈ ಹಣವನ್ನು ವಾಪಸ್ ಕೊಡುವಂತೆ ಸುಬ್ರಮಣ್ಯಗೆ ಒತ್ತಾಯಿಸಿದ್ದಾಳೆ.
ಇದಕ್ಕೆ ಆತ ಒಪ್ಪದಿದ್ದಾಗ ಆತನನ್ನು ತನ್ನ ಅಣ್ಣ ರಾಕೇಶ್ ಹಾಗೂ ಆತನ ಸ್ನೇಹಿತರೊಡನೆ ಸೇರಿ ಸುಬ್ರಹ್ಮಣ್ಯ ನನ್ನು ಅಪಹರಿಸಿ ಐದು ದಿನಗಳ ಕಾಲ ಹಿಂಸೆ ನೀಡಿದ್ದಾರೆ.
ಅಲ್ಲದೆ, ಐದು ದಿನಗಳ ಕಾಲ ಗೃಹ ಬಂಧನದಲ್ಲಿಟ್ಟು, ಅವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದಲ್ಲದೆ ಪತಿ ಸುಬ್ರಮಣ್ಯ ನ ಉಗುರು ಕಿತ್ತು ರಾಡ್ ನಿಂದ ಹಲ್ಲೆ ಮಾಡಿರುವ ಕಿರಾತಕರು ನಂತರ ಆತನನ್ನು ಕೊಳ್ಳೇಗಾಲದ ಮುಡಿಗುಂಡಂ ನಲ್ಲಿರುವ ಆತನ ಮನೆಗೆ ತಂದು ಬಿಟ್ಡುಹೋಗಿದ್ದಾರೆ.
ಇದರಿಂದಾಗಿ ಹಲ್ಲೆಗೊಳಗಾಗಿ ಅಸ್ವಸ್ತನಾಗಿದ್ದ ಸುಬ್ರಮಣ್ಯ ಮೂರು ದಿನಗಳ ಕಾಲ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತ ಪಟ್ಟಿದ್ದಾನೆ. ಇದಕ್ಕೂ ಮೊದಲು ಮೈಸೂರಿನ ವಿಜಯನಗರ ಪೊಲೀಸರ ಮುಂದೆ ರಶ್ಮಿ ತನಗೆ ಚಿತ್ರಹಿಂಸೆ ನೀಡಿರುವ ಬಗ್ಗರ ವಿವರ ನೀಡಿದ್ದಾನೆ.
ಹೀಗಾಗಿ ಇದೀಗ ಸುಬ್ರಮಣ್ಯನ ಹೆಂಡತಿ ರಶ್ಮಿ, ಆಕೆಯ ಸಹೋದರ ರಾಕೇಶ್, ಮುಡಿಗುಂಡದ ಪ್ರದೀಪ್, ರಾಕೇಶ್ ಪಡಗೂರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪತ್ನಿ ರಶ್ಮಿ ಯನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿ ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.