ರಾಜ್ಯ

ನಿರ್ಗತಿಕರಿಗೆ ಕೈ ತುತ್ತು ನೀಡಿ ಮಾನವೀಯತೆ ತೋರಿಸುವ ಕರಿಯಪ್ಪ ಶಿರಹಟ್ಟಿ ದಂಪತಿ

ಹುಬ್ಬಳ್ಳಿ-ಧಾರವಾಡ Prajakiran.com : ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಎಲ್ಲೆ ನಿರ್ಗತಿಕರು ಕಂಡರೆ ಸಾಕು ಅಲ್ಲಿ ಕರಿಯಪ್ಪ ಶಿರಹಟ್ಟಿ ದಂಪತಿ ಹಾಜರ್ ಆಗ್ತಾರೆ.

ಹೌದು ಇವರು ಕಳೆದ ಹದಿನೈದು ವರ್ಷಗಳಿಂದ ತಮ್ಮ ತಂದೆ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಅವರ ಹೆಸರಿನಲ್ಲಿ ಸೇವಾಸಂಸ್ಥೆಯನ್ನು ಆರಂಭಿಸಿ ಇಂತಹ ಕೆಲಸ ಕಾರ್ಯಗಳಿಗೆ ಕರಿಯಪ್ಪ ಶಿರಹಟ್ಟಿ ದಂಪತಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ.

ಈ ದಂಪತಿಗಳು ತಮಗೆ ಮಕ್ಕಳಿಲ್ಲದಿದ್ದರೆ ಏನಾಯಿತು, ನಮಗೆ ಈ ರಸ್ತೆಯಲ್ಲಿ ಮಲಗಿರುವ ಬಡವರು, ನಿರ್ಗತಿಕರು, ಅನ್ನಕ್ಕಾಗಿ ಪರದಾಡವರರನ್ನೇ ತಮ್ಮ ಮಕ್ಕಳು ಎಂದು ಪರಿಗಣಿಸಿ ಅವರಿಗೆ ದಿನನಿತ್ಯ ಕೈ ತುತ್ತು ನೀಡಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.

ಅದರಲ್ಲೂ ವಿಶೇಷವಾಗಿ ನಿರ್ಗತಿಕರಿಗೆ, ಜೋಪಡಿ ಜನಾಂಗದವರಿಗೆ, ಅದರಲ್ಲೂ ಬಟ್ಟೆಯಿಲ್ಲದವರು ಕಂಡರೆ ಅವರಿಗೆ ಕೇವಲ ಮನ ಮಿಡಿಯದೆ, ಅಲ್ಲಿಯೇ ನಿಂತು ಅವರ ಮನವೊಲಿಸಿ, ಕೂದಲು ಕತ್ತರಿಸಿ, ಸೇವಿಂಗ್ ಮಾಡಿ, ಅವರಿಗೆ ಮೈ ತೊಳೆದು, ಹೊಸ ಬಟ್ಟೆ ತೊಡಿಸಿ ಕೈ ತುತ್ತು ನೀಡಿದ ಮೇಲೆಯೇ ಸಮಾಧಾನ.

ಅವರೂ ಇಲ್ಲಿಯವರೆಗೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಗೋವಾ, ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ಮಲೆನಾಡಿನ ಶಿವಮೊಗ್ಗ ಹೀಗೆಯೇ ಎಲ್ಲಿಯೇ ಸಂಚರಿಸಿದರೂ ಸದಾ ಬ್ಯಾಗ್ ನಲ್ಲಿ ಬಿಸ್ಕಟ್ , ಸೇವಿಂಗ್ ಕಿಟ್, ಬಟ್ಟೆಗಳನ್ನು ಹೊತ್ತು ಸಾಗುವ ಕರಿಯಪ್ಪ ಶಿರಹಟ್ಟಿ ಹಾಗೂ ಶ್ರೀಮತಿ ಸುನಂದಾ ಕರಿಯಪ್ಪ ಶಿರಹಟ್ಟಿ ದಂಪತಿ ಆದರ್ಶ ಇತರರಿಗೆ ಮಾದರಿಯಾಗಿದೆ.

ಇಲ್ಲಿಯವರೆಗೆ ಅಂದಾಜು 1500 ನಿರ್ಗತಿಕರ ಸೇವೆ ಮಾಡಿರುವ ಈ ದಂಪತಿ ಇದರೊಂದಿಗೆ ತಮ್ಮಅಪ್ಪ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಪೌರ ಕಾರ್ಮಿಕರಾಗಿದ್ದರಿಂದ ಪೌರ ಕಾರ್ಮಿಕರಿಗೆ ವಿಶೇಷ ಪ್ರೀತಿ ಗೌರವದಿಂದ ಕಂಡು ಅವರಿಗೆ ಮಾಸ್ಕ್ ಹಾಕದೆ ಬರುವುದಿಲ್ಲ.

ಇದಲ್ಲದೆ, ವಿದೇಶಕ್ಕೆ ಹೋಗಿ ಬಂದ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಸಮಾಜ ಸೇವೆ ಮಾಡುವ ಹಾಗೂ ರಾಜ್ಯ ಪ್ರಶಸ್ತಿಗೆ ಆಯ್ಕೆ ಯಾದ ಶಿಕ್ಷಕರು, ಪತ್ರಕರ್ತರ ಸನ್ಮಾನ ಮಾಡಿ ಗೌರವಿಸಿದ್ದಾರೆ.

ಪ್ರತಿ ನಿತ್ಯ ಹುಬ್ಬಳ‍್ಳಿಯ ಹಳೆ ಹುಬ್ಬಳ‍್ಳಿಯಿಂದ ರೈಲ್ವೆ ಸ್ಟೇಶನ್ ವರೆಗೆ, ಮಹಾನಗರ ಪಾಲಿಕೆಯಿಂದ ಚೆನ್ನಮ್ಮ ವೃತ್ತದವರೆಗೆ, ಇಂದಿರಾ ಗಾಜಿನ ಅರಮನೆ, ಕಿಮ್ಸ್, ಹೊಸೂರು, ವಿದ್ಯಾನಗರ, ಪೈ ಹೋಟೆಲ್, ದೇಶಪಾಂಡೆ ನಗರದಲ್ಲಿಯ ಕನಿಷ್ಟ 30 ಜನರಿಗೆ ಅನ್ನ ಉಣಿಸುವುದು ರೂಢಿಸಿಕೊಂಡಿದ್ದಾರೆ.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರ್ಗತಿಕರಿಗೆ ಬಸ್ ಹತ್ತಿಸುವುದು. ಬಟ್ಟೆ ಕೊಡುವುದು, ಮಕ್ಕಳಿಗೆ ಪಠ್ಯ ಪುಸ್ತಕ, ನೋಟ್ ಬುಕ್, ಪೆನ್ ಪೆನ್ಸಿಲ್ ನೀಡುವ ಮೂಲಕ ಅವರ ಮನಸ್ಸು ಗೆಲ್ಲುವಂತಹ ಕೆಲಸ ಮಾಡುವುದು ವಿಶೇಷವಾಗಿದೆ.

ಇವರ ಇನ್ನೊಂದು ವಿಶೇಷವೆಂದರೆ ತಮ್ಮ ಮನೆಯಲ್ಲಿಯೇ ರೊಟ್ಟಿ, ಚಪಾತಿ, ಹೊಳಿಗೆ, ಇಡ್ಲಿ ಹಾಗೂ ತೆಂಗಿನ ಕಾಯಿ ಮಾರಾಟ ಮಾಡಿ ಅದರಲ್ಲಿ ಬರುವ ಆದಾಯದಲ್ಲಿ ಇಂತಹ ಸಮಾಜ ಸೇವೆಯಲ್ಲಿ ತೊಡಗಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಸರಕಾರ ಹಾಗೂ ದಾನಿಗಳ ಸಹಾಯವಿಲ್ಲದೆ ಇಂತಹ ವಿಶಿಷ್ಟ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕರಿಯಪ್ಪ ಹಾಗೂ ಸುನಂದಾ ಶಿರಹಟ್ಟಿ ದಂಪತಿಗೆ ನಮ್ಮದೊಂದು ನಮನ.ಅವರಿಗೆ ಅಭಿನಂದಿಸಲು ಅವರ ಚರವಾಣಿ 7411817986ಗೆ ಕರೆ ಮಾಡಿ.

Please follow and like us:

Leave a Reply

Your email address will not be published. Required fields are marked *