ಧಾರವಾಡ ; ವಿದ್ಯಾನಗರಿ ಧಾರವಾಡದಲ್ಲಿ ರಾಜಾರೋಷವಾಗಿ ಇಸ್ಪೇಟ್ ಅಡ್ಡಾಗಳು ನಡೆಯುತ್ತಿದ್ದು, ದಂಧೆಕೋರರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.
ಪ್ರಕರಣ ದಾಖಲಿಸಿ, ಮಾಮೂಲು ತೆಗೆದುಕೊಂಡು ಬಿಟ್ಟು ಬಿಡ್ತಾರೆ ಬಿಡು ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ. ಅಲ್ಲದೆ, ಕೆಲವೊಂದು ಪೊಲೀಸರು ಅವರೊಂದಿಗೆ ಶಾಮೀಲಾಗಿ, ತಿಂಗಳಿಗೆ ಇಂತಿಷ್ಟು ಹಣ ನಿಗದಿಪಡಿಸಿಕೊಂಡು ಆಡಲು ಅವಕಾಶ ನೀಡುತ್ತಿದ್ದಾರೆ ಎಂದು ದಂಧೇಕೋರರು ಹೇಳಿಕೊಂಡು ಓಡಾಡುತ್ತಿದ್ದಾರೆ.
ಅಲ್ಲದೆ, ಕೆಲವಡೆ ಪೊಲೀಸ್ ದಾಳಿ ನಡೆಸುವ ಮುನ್ನವೇ ಅವರು ಅಲ್ಲಿಂದ ಕಾಲು ಕಿತ್ತುವುದು ಕೂಡ ರೂಢಿಯಾಗಿದೆ. ಅದರೊಂದಿಗೆ ಕಿಂಗ್ ಪಿನ್ ಗಳನ್ನು ಬಿಟ್ಟು ನಾಮಾಕಾವಾಸ್ತೆ ಎನ್ನುವಂತೆ ಒಂದಿಬ್ಬರನ್ನು ಬಂಧಿಸಿ, ಇಷ್ಟು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆ ನೀಡುವದು ಪೊಲೀಸರ ಕಾರ್ಯವೈಖರಿಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಒಂದೇ ದಿನದಲ್ಲಿ ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿ ಒಂದರಲ್ಲಿಯೇ ಐದು ಇಸ್ಪೀಟ್ ಪ್ರಕರಣಗಳು ಪತ್ತೇಯಾಗಿದ್ದರೆ, ಉಪನಗರ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿರುವುದು ಇದಕ್ಕೆ ಕೈಗನ್ನಡಿಯಾಗಿದೆ.
ಇನ್ನೂ ದೀಪಾವಳಿಯ ಮೂರು ದಿನಗಳ ಸಂಭ್ರಮ ಮುಗಿಯುವುದರೊಳಗೆ ಅವಳಿ ನಗರದಲ್ಲಿ ಕೋಟಿಗಟ್ಟಲೇ ಹಣ ಕೈ ಬದಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈಗಲಾದರೂ ಪೊಲೀಸ್ ಅಧಿಕಾರಿಗಳು ಬಿಸಿ ತಾಕಿಸುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
