ಹುಬ್ಬಳ್ಳಿ : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಬೆಳಗಾವಿ ಸಂಸದ ಸುರೇಶ ಅಂಗಡಿ ನೀಡಿರುವ ಹೇಳಿಕೆಗೆ ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಕಿಡಿ ಕಾರಿದ್ದಾರೆ.
ಸುರೇಶ ಅಂಗಡಿ ತಮ್ಮ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ. ರಾಜ್ಯದ ಮುಖ್ಯಮಂತ್ರಿ ವಿರುದ್ದ ಹೇಳಿಕೆ ನೀಡುವಾಗ ಸ್ವಲ್ಪ ಮೈ ಮೇಲೆ ಅರಿವು ಇಟ್ಟುಕೊಂಡು ಮಾತನಾಡುವುದು ಒಳಿತು. ಕೂಡಲೇ ಅವರು ಮುಖ್ಯಮಂತ್ರಿ ಬಳಿ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಹದಾಯಿ, ಕಳಸಾ-ಬಂಡೂರಿ ವಿಚಾರ ಇರಬಹದು. ಕೊಡಗು ಪರಿಹಾರ ನಿಧಿಗೆ ತಾರತಮ್ಯ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಳ ಸೇರಿದಂತೆ ಅನೇಕ ಜನ ವಿರೋಧಿ ನೀತಿಗಳ ವಿರುದ್ದ ಮೌನ ವಹಿಸಿರುವ ಬಿಜೆಪಿ ಸಂಸದರು ರಾಜ್ಯ ಸರಕಾರದ ವಿರುದ್ದ ಮಾತನಾಡುವ ಯಾವುದೇ ನೈತಿಕತೆ ಹೊಂದಿಲ್ಲ ಎಂದು ಗುಡುಗಿದ್ದಾರೆ.
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಮಮಂದಿರ ವಿವಾದ ಮತ್ತೆ ಆರಂಭಿಸಿದಲ್ಲದೆ, ರಾಜ್ಯದಲ್ಲಿ ಟಿಪ್ಪು ಜಯಂತಿ ವಿರೋಧಿಸುವ ಕೆಲಸಗಳಿಗೆ ಕೈ ಹಾಕಿರುವುದು ಅವರ ಯೋಗ್ಯತೆ ತೋರಿಸುತ್ತದೆ ಎಂದು ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಟೀಕಿಸಿದ್ದಾರೆ.
ಇದೇ ವೇಳೆ ರಾಜ್ಯದ ರಾಮನಗರ, ಜಮಖಂಡಿ ವಿಧಾನಸಭಾ ಮತ್ತು ಮಂಡ್ಯ ಹಾಗೂ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಸಮ್ಮೀಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಸಂದ ಜಯವಾಗಿದೆ. ರಾಜ್ಯ ಬಿಜೆಪಿ ನಾಯಕರಿಗೆ ರಾಜ್ಯದ ಜನತೆ ಸರಿಯಾದ ಪಾಠ ಕಲಿಸುವ ಮೂಲಕ ಸರಕಾರ ಅಸ್ಥಿರಗೊಳಿಸುವ ಯತ್ನಕ್ಕೆ ಉತ್ತರ ನೀಡಿದ್ದಾರೆ. ಈಗಾಲಾದರೂ ರಾಜ್ಯ ಬಿಜೆಪಿ ಶಾಸಕರು ವಿರೋಧ ಪಕ್ಷದಲ್ಲಿ ಕುಳಿತು ಸಮ್ಮಿಶ್ರ ಸರಕಾರ ಕೈಗೊಳ್ಳುವ ಅಭಿವೃದ್ಧಿ ಯೋಜನೆಗೆ ಸಹಕಾರ ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಮ್ಮೀಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನೆಮ್ಮದಿಯಾಗಿ ಆಡಳಿತ ಮಾಡಲು ಬಿಡದೆ, ಸಮ್ಮಿಶ್ರ ಸರಕಾರ ಉರುಳಿಸುವ ಹಾಗೂ ಆಪರೇಶನ್ ಕಮಲದ ಭೀತಿಯನ್ನು ಉಂಟು ಮಾಡಿದ್ದ ಬಿಜೆಪಿ ನಾಯಕರಿಗೆ ಐದು ಕ್ಷೆತ್ರದ ಮತದಾರರು ಉಪಚುನಾವಣೆಯ ಮೂಲಕ ತಕ್ಕ ಸಂದೇಶ ರವಾನಿಸಿದ್ದಾರೆ ಎಂದು ಕುಟುಕಿದ್ದಾರೆ.
