ರಾಜ್ಯ

ಕರ್ನಾಟಕ ವಿಶ್ವವಿದ್ಯಾಲಯದ ಹೆಸರು ಕೆಡಿಸಲು ಕೆಲವರ ಹುನ್ನಾರ

ಧಾರವಾಡ : ಕೆಲವೊಂದು ವ್ಯಕ್ತಿಗಳು ಮತ್ತು ಒಂದೆರಡು ಸಂಘಟನೆಗಳ ಕೆಲವು ಸದಸ್ಯರು ಸೇರಿಕೊಂಡು ಕರ್ನಾಟಕ ವಿಶ್ವವಿದ್ಯಾಲಯದ ಹೆಸರು ಕೆಡಿಸಲು ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಕವಿವಿ ಕುಲಸಚಿವ ಕಲ್ಲಪ್ಪ ಹೊಸಮನಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಅವರು, ಕರ್ನಾಟಕ ವಿಶ್ವವಿದ್ಯಾಲಯದ ನೌಕರರೆಂದು ಸುಳ್ಳು ಹೇಳಿಕೊಂಡು ಬೆಳಗಾವಿಯಲ್ಲಿ ನಡೆದಿರುವ ಚಳಿಗಾಲದ ಅಧಿವೇಶನದಲ್ಲಿ ಹಲವು ಸಚಿವರನ್ನು ಕಂಡು ಕರ್ನಾಟಕ ವಿಶ್ವವಿದ್ಯಾಲಯದ ಬಗ್ಗೆ ಕಪೋಲಕಲ್ಪಿತ ಸುಳ್ಳು ಕಟ್ಟು ಕಥೆಗಳನ್ನು ಹೇಳುತ್ತ, ಕ.ವಿ.ವಿ. ಯ ಕೆಲವು ಅಧಿಕಾರಿಗಳ ಬಗ್ಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ ನೀಡುತ್ತಾ ಕರ್ನಾಟಕದ ವಿಶ್ವವಿದ್ಯಾಲಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ತಿಳಿದು ಬಂದಿದೆ. ಈ ತಂಡದಲ್ಲಿ ಕೆಲವು ಮಹಿಳೆಯರೂ ಇರುವ ಆಘಾತಕಾರಿ ಸಂಗತಿಯೂ ತಿಳಿದು ಬಂದಿದೆ ಎಂದು ದೂರಿದ್ದಾರೆ.

ಇಂತಹ ವಂಚಕರು ಕರ್ನಾಟಕದ ವಿಶ್ವವಿಧ್ಯಾಲಯದ ಹೆಸರನ್ನು ಹಾಳು ಮಾಡುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ವಿಶ್ವವಿದ್ಯಾಲಯದ ಅಧಿಕೃತ ನೌಕರರ ಹೆಸರುಗಳನ್ನು, ವಿಳಾಸವನ್ನು, ಮತ್ತು ಹುದ್ದೆಯನ್ನು ಹೈಜಾಕ್ ಮಾಡಿರುವುದು ಅಪರಾಧದ ಕೃತ್ಯವಾಗಿದೆ. ಈ ಕುರಿತು ಸಂಬಂಧಿಸಿದ ಪೊಲೀಸರಿಗೆ ದೂರು ನೀಡಲು ಕ.ವಿ.ವಿ. ಕಾರ್ಯತತ್ಪರವಾಗಿದೆ ಎಂದು ಅವರು ವಿವರಿಸಿದ್ದಾರೆ.

ಹಾಗೂ ಸಂಬಂಧಿಸಿದ ಸಿ.ಸಿ. ಕ್ಯಾಮರಾಗಳ ತಪಾಸಣೆಗೆ ಒತ್ತಾಯಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯವು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಮುಂದಿನ ಕಾನೂನು ಕ್ರಮಕ್ಕೆ ಸಜ್ಜಾಗಿರುತ್ತದೆ. ಕರ್ನಾಟಕ ವಿಶ್ವವಿದ್ಯಾಲಯದ ಘನತೆಯ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳ ಹಿತದೃಷ್ಟಿಯಿಂದ ಸೂಕ್ತ ಕಾನೂನಾತ್ಮಕ ಕ್ರಮಕ್ಕೆ ಕ.ವಿ.ವಿ. ಯು ಒತ್ತಾಯಿಸುತ್ತಾ ಸೂಕ್ತ ಕ್ರಮಕ್ಕೆ ಮುಂದಾಗಿದೆ ಎಂದು ಕವಿವಿ ಕುಲಸಚಿವ ಕಲ್ಲಪ್ಪ ಹೊಸಮನಿ ಅವರು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *