ಬೆಳಗಾವಿ : ರಾಜ್ಯದ ಸಮ್ಮೀಶ್ರ ಸರಕಾರದ ಜೆಡಿಎಸ್ ಕಾಂಗ್ರೆಸ್ ಶಾಸಕರಿಗೆ ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ಅವರು ಮಂಗಳವಾರ ರಾತ್ರಿ ಡಿನ್ನರ್ ಹಮ್ಮಿಕೊಂಡಿದ್ದಾರೆ.
ಈ ವೇಳೆ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ನ ಎಲ್ಲ ಶಾಸಕರೊಂದಿಗೆ ಒನ್ ಟೂ ಒನ್ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಔತಣ ಕೂಟಕ್ಕೆ ಸಚಿವ ಡಿ.ಕೆ. ಶಿವಕುಮಾರ ಜಾರಕಿಹೊಳಿ ಸಹೋದರರಿಗೂ ಆಹ್ವಾನ ನೀಡಿದ್ದು, ವಿಶೇಷವಾಗಿ ತಮ್ಮ ಮೇಲೆ ಮುನಿಸಿಕೊಂಡಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಆಮಂತ್ರಣ ನೀಡಿದ್ದಾರೆ.
ಆದರೆ ಅವರು ಸಚಿವ ಡಿಕೆಶಿ ಔತಣಕೂಟದಲ್ಲಿ ಭಾಗಿಯಾಗ್ತಾರಾ ಅಥವಾ ಮತ್ತೇ ಮೊದಲಿನಂತೆ ಅಂತರ ಕಾಯ್ದುಕೊಳ್ಳುತ್ತಾರಾ ಎಂಬ ಕುತೂಹಲ ಇದೀಗ ಮೂಡಿಸಿದೆ.
ಈ ಹಿಂದೆ ಸಚಿವ ರಮೇಶ ಜಾರಕಿಹೊಳಿ ಅವರು ಬಹಿರಂಗವಾಗಿಯೇ ಸಚಿವ ಡಿ.ಕೆ. ಶಿವಕುಮಾರ ವಿರುದ್ದ ಮುನಿಸುಕೊಂಡಿದ್ದು, ಈ ಸಂಬಂಧ ಹೈಕಮಾಂಡ್ ಗೆ ಕೂಡ ದೂರು ನೀಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರ ಹಿರಿಯ ಸಹೋದರ ಸತೀಶ ಜಾರಕಿಹೊಳಿ ಕೂಡ ಯಾರು ಬಂದೂ ರೈತರ ಪ್ರತಿಭಟನೆ ಅಂತ್ಯಗೊಳಿಸಿದರೆ ಬೇರೆ ಜಿಲ್ಲೆಯಲ್ಲಿ ಲೀಡರ್ ಆಗೋಕೆ ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದರು.
ಅಲ್ಲದೆ, ಅವರಿಬ್ಬರು ಇದೀಗ ಭಿನ್ನಮತೀಯ ಶಾಸಕರ ನಾಯಕತ್ವ ವಹಿಸಿಕೊಂಡಿರುವುದು ಸಮ್ಮೀಶ್ರ ಸರಕಾರಕ್ಕೆ ಒಂದು ರೀತಿಯಲ್ಲಿ ಮುಜುಗರದ ವಾತವರಣ ನಿರ್ಮಾಣ ಮಾಡಿದೆ ಎಂದರೆ ತಪ್ಪಾಗಲಾರದು. ಇದೀಗ ಅವರ ಜಿಲ್ಲೆಯಲ್ಲಿಯೇ ಔತಣಕೂಟ ಆಯೋಜಿಸುವ ಮೂಲಕ ಬೆಳಗಾವಿಯ ನೆಲದಲ್ಲಿಯೇ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಡಿಸೆಂಬರ್ 22ರಂದು ರಾಜ್ಯದ ಸಚಿವ ಸಂಪುಟ ವಿಸ್ತರಣೆ ಆಗುವುದು ಬಹುತೇಕ ಖಚಿತಗೊಂಡ ಹಿನ್ನಲೆಯಲ್ಲಿ ಸಚಿವರು ಈ ಔತಣಕೂಟ ಆಯೋಜಿಸಿದ್ದಾರೆ. ಆ ಮೂಲಕ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆ ಕೂಡ ಸಚಿವ ಡಿ.ಕೆ. ಶಿವಕುಮಾರ ಕಾಂಗ್ರೆಸ್ ನ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಔತಣಕೂಟ ಹಮ್ಮಿಕೊಂಡಿದ್ದರು. ಅಲ್ಲದೆ, ರಾಜ್ಯದ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೂಡ ಅವರಿಗೆ ವಿಶೇಷ ಆಮಂತ್ರಣ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.