ಶಿವಣ್ಣ ಬೆಲ್ಲದ ವಿಸಿಟಿಂಗ್ ಕಾರ್ಡ್ ಸಮಾಜ ಸೇವಕ
ಧಾರವಾಡ : ನಾಡಿನ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಣ್ಣ ಬೆಲ್ಲದ ಅವರಂತಹ ಮೋಸಗಾರರನ್ನು ಸದಸ್ಯರು ಆಯ್ಕೆ ಮಾಡಬಾರದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಕೇಂದ್ರ ಸಮಿತಿ ಸದಸ್ಯ ಪ್ರೊ.ವಿ.ಸಿ.ಸವಡಿ ಮತ್ತು ಜಿಲ್ಲಾ ಘಟಕದ ಪ್ರಭಾರ ಅಧ್ಯಕ್ಷ ಶಿವಾನಂದ ಅಂಬಡಗಟ್ಟಿ ಅವರು, ಮಹಾಸಭಾದ ಆಡಳಿತದಲ್ಲಿ ಅವ್ಯವಹಾರ ಮತ್ತು ಸಮಾಜಕ್ಕೆ ವಂಚನೆಗೈದಿರುವ ಶಿವಣ್ಣ ಬೆಲ್ಲದ ಅವರನ್ನು ಸಂಘದಿಂದ ದೂರ ಇಡುವುದು ಒಳಿತು ಎಂದರು. ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಣ್ಣ ಬೆಲ್ಲದ ಅವರು ತಮ್ಮ ಕರಪತ್ರದಲ್ಲಿ ಧಾರವಾಡದ ಲಿಂಗಾಯತ ಭವನಕ್ಕೆ ೧೦ ಕೋ.ರೂ.ಕೊಟ್ಟಿರುವುದಾಗಿ ಹೇಳಿದ್ದಾರೆ.ಇದು ಶುದ್ಧ ಸುಳ್ಳು ಮತ್ತು ಹಣ ಕೊಟ್ಟಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಅಲ್ಲದೇ, ಭವನ ನಿರ್ಮಾಣಕ್ಕೆ ಕೇಂದ್ರ ಸಮಿತಿ, ಶಾಸಕರು ಹಾಗೂ ಸಮಾಜದ ಅನೇಕ ದಾನಿಗಳು ಹಣ ನೀಡಿದ್ದಾರೆ. ಆದರೆ, ಭವನ ನಿರ್ಮಾಣಕ್ಕೆ ಯಾವುದೇ ಬಿಡಿಗಾಸು ನೀಡದ ಶಿವಣ್ಣ ಬೆಲ್ಲದ ಅವರು, ನೀಡಿರುವ ಹಣ ಎಲ್ಲಿಯೂ ಸಭಾದ ಖಾತೆಗೆ ಜಮೆ ಆಗಿಲ್ಲ. ಈ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಆದರೂ ಹಣ ನೀಡಿದ್ದೇನೆ ಎಂದು ಹೇಳಿ ಸಮಾಜದವರನ್ನು ವಂಚಿಸುತ್ತ ಬಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಭವನ ನಿರ್ಮಾಣದ ನಂತರ ಯಾರಿಗೂ ಬಾಡಿಗೆ ಕೊಡದೇ ಮಹಾಸಭಾಗೆ ಲಕ್ಷಾಂತರ ರೂಪಾಯಿ ಹಾನಿ ಮಾಡಿದ್ದಾರೆ. ಬಸವತತ್ವ ಪ್ರಚಾರ ಸಂಸ್ಥೆಯ ಹೆಸರಿನಲ್ಲಿ ಭವನದಲ್ಲಿನ ಎರಡು ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದು ಇದುವರೆಗೂ ಬಾಡಿಗೆ ಸಂದಾಯ ಮಾಡಿಲ್ಲ. ಭವನದ ಉಪಯೋಗ ಆಗಬೇಕು ಮತ್ತು ಆದಾಯವೂ ಬರಬೇಕು ಎಂಬ ಉದ್ದೇಶದಿಂದ ಈಗ ಬಾಡಿಗೆ ನೀಡುತ್ತಿರುವುದನ್ನು ವಿರೋಧಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ತಮಗೆ ಬಾಡಿಗೆ ಸಿಗಬೇಕು, ಬೇರೆ ಯಾರಿಗೂ ಸಿಗಬಾರದು ಎಂಬ ಶಿವಣ್ಣ ಬೆಲ್ಲದ ಅವರ ಸ್ವಾರ್ಥ ಧೋರಣೆಯನ್ನು ಸಮಾಜ ಬಾಂಧವರ ಪರವಾಗಿ ಖಂಡಿಸುತ್ತೇವೆ ಎಂದರು. ಮಹಾಸಭಾ ಮತ್ತು ಸಮಾಜದ ಹೆಸರಿನಿಂದ ದೊಡ್ಡ ಸ್ಥಾನಗಳನ್ನು ಗಳಿಸಿರುವ ಬೆಲ್ಲದ ಅವರ ಕುಟುಂಬದಿಂದ ಸಮಾಜಕ್ಕೆ ಯಾವುದೇ ರೀತಿಯಲ್ಲಿ ಲಾಭ ಆಗಿಲ್ಲ.ಕೇವಲ ವಿಸಿಟಿಂಗ್ ಕಾರ್ಡ್ ಸಮಾಜ ಸೇವಕರು ಎಂದು ವ್ಯಂಗ್ಯವಾಡಿದರು. ಬೆಲ್ಲದ ಅವರು ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ನಡೆಯುತ್ತಿದೆ. ಸಜ್ಜನರ ಮುಖವಾಡ ಧರಿಸಿ ಸಮಾಜವನ್ನು ಮಹಾಸಭಾದ ಮೂಲಕ ಮೋಸ ಮಾಡುತ್ತ ಬಂದಿದ್ದಾರೆ. ಕವಿವ ಸಂಘದ ಚುನಾವಣೆಯಲ್ಲಿ ಮಹಸಭಾ ಯಾವುದೇ ಗುಂಪಿನ ಪರ ಅಥವಾ ವಿರೋಧವಾಗಿ ಹೇಳಿಕೆ ನೀಡುತ್ತಿಲ್ಲ. ಆದರೆ ಸಮಾಜ ಸೇವೆಯ ಹೆಸರಿನಲ್ಲಿ ಶಿವಣ್ಣ ಬೆಲ್ಲದ ಅವರಂತಹ ದುಷ್ಠರನ್ನು ಕವಿವ ಸಂಘ ಮಾತ್ರವಲ್ಲದೇ ಯಾವುದೇ ಸಂಘ-ಸಂಸ್ಥೆಗಳಿಗೆ ಆಯ್ಕೆ ಆಗಬಾರದು ಎಂಬುದು ಮಾತ್ರ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸನಗೌಡ ಸಿದ್ದಾಪೂರ ಮತ್ತು ಕರೆಪ್ಪ ಅಮ್ಮಿನಬಾವಿ ಮತ್ತಿತರರು ಇದ್ದರು.