ರಾಜ್ಯ

ಉತ್ತರ ಕರ್ನಾಟಕಕ್ಕೆ ಒಂಬತ್ತು ಕಚೇರಿಗಳ ಸ್ಥಳಾಂತರಕ್ಕೆ ಕೋನರಡ್ಡಿ ಸ್ವಾಗತ

ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದ ದಶಕಗಳ ಬೇಡಿಕೆಯಾಗಿದ್ದ ಅನೇಕ ಪ್ರಮುಖ ಸರ್ಕಾರಿ ಕಚೇರಿಗಳನ್ನು ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ದಿಟ್ಟ ಹೆಜ್ಜೆಯಿಂದಾಗಿ ಈ ಭಾಗಕ್ಕೆ ಸ್ಥಳಾಂತರಗೊಂಡಿರುವುದು ಸಂತಸದ ಸಂಗತಿಯಾಗಿದ್ದು, ಅವರ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುತ್ತೆವೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.

೧೦ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಿ ಆದೇಶ ಹೊರಡಿಸಿರುವುದು ಸಾಕಷ್ಟು ಅನುಕೂಲಕರವಾಗಲಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ಪ್ರತ್ಯೆಕಗೊಳಿಸಿ ಹುಬ್ಬಳ್ಳಿಗೆ ನೀಡಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಇದರೊಂದಿಗೆ ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರ ಕಚೇರಿ ಹಾಗೂ ಉಪಲೋಕಾಯುಕ್ತ ಕಚೇರಿಯನ್ನು ಧಾರವಾಡಕ್ಕೆ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಕೃಷ್ಣಾ ಜಲಭಾಗ್ಯ ನಿಗಮವನ್ನು ಆಲಮಟ್ಟಿಗೆ, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮ, ಸಕ್ಕರೆ ನಿರ್ದೇಶಕರು, ಕಬ್ಬು ಅಭಿವೃದ್ದಿ ಆಯುಕ್ತರ ಕಚೇರಿಯನ್ನು ಬೆಳಗಾವಿಗೆ, ಮಾಹಿತಿ ಆಯೋಗದ ಆಯುಕ್ತರ ಪೀಠವನ್ನು ಬೆಳಗಾವಿ ಹಾಗೂ ಕಲಬುರಗಿಗೆ ಹಂಚಿಕೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯನ್ನು ಹಂಪಿಗೆ ಸ್ಥಳಾಂತರಿಸಿರುವುದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಬಗ್ಗೆ ಇರುವ ಕಾಳಜಿ ಹಾಗೂ ದೂರದೃಷ್ಟಿಯನ್ನು ತೋರಿಸುತ್ತದೆ. ಹೀಗಾಗಿ ಅವರಿಗೆ ಸಮಗ್ರ ಉತ್ತರ ಕರ್ನಾಟಕ ಭಾಗದ ಜನತೆಯ ಪರವಾಗಿ ಅಭಿನಂದಿಸುತ್ತೆವೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.

ಈ ಹಿಂದೆ ಕೂಡ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಧಾರವಾಡದಲ್ಲಿ ಹೈಕೋರ್ಟ ಪೀಠದ ಬೃಹತ್ ಕಟ್ಟಡ ಹಾಗೂ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿರುವುದು ಐತಿಹಾಸಿಕ ನಿರ್ಧಾರವಾಗಿರುವುದನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದು ಸ್ಮರಿಸಿದ್ದಾರೆ.

ಇದೇ ವೇಳೆ ಕರ್ನಾಟಕ ನೀರಾವರಿ ನಿಗಮದ ಕಚೇರಿಯನ್ನು ದಾವಣಗೆರೆ ಸ್ಥಳಾಂತರಿಸುವುದನ್ನು ಕೈ ಬಿಟ್ಟು ಅದನ್ನು ಧಾರವಾಡದಲ್ಲಿಯೇ ಮುಂದುವರೆಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗುವುದು.

ಈಗಾಗಲೇ ಕರ್ನಾಟಕ ನೀರಾವರಿ ನಿಗಮದ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಧಾರವಾಡದಲ್ಲಿ ಸ್ಥಳ ಗುರುತಿಸಲಾಗಿದ್ದು, ರಾಜ್ಯ ಸರಕಾರ ಅದಕ್ಕಾಗಿ ೪.೫೦ ಕೋಟಿ ಬಿಡುಗಡೆಗೊಳಿಸಿದೆ. ಹೀಗಾಗಿ ಅದನ್ನು ಇಲ್ಲಿಯೇ ಮುಂದುವರೆಸಲು ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವೊಲಿಸಲಾಗುವುದು.

ಈ ಭಾಗದಲ್ಲಿ ಮಹದಾಯಿ, ಕಳಸಾ-ಬಂಡೂರಿ ಕಾಮಗಾರಿಗಳು ಹಾಗೂ ಮಲಪ್ರಭಾ, ಘಟಪ್ರಭ ಅಚ್ಚಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಕಾಮಗಾರಿಗಳು ನಡೆದಿರುವುದರಿಂದ ಅದನ್ನು ಇಲ್ಲಿಯೇ ಮುಂದುವರೆಸುವಂತೆ ಒತ್ತಡ ಹೇರಲಾಗುವುದು ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *