ಜಿಲ್ಲೆ

ಕುರುಕಲು ತಿಂಡಿ, ಪಾಪಡಿ ತಯಾರಿಕಾ ಘಟಕಕ್ಕೆ ಬೀಗ

ಧಾರವಾಡ : ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಬಳಿಯ ಅನಧೀಕೃತ ಕುರುಕಲು ತಿಂಡಿ ಮತ್ತು ಪಾಪಡಿ ತಯಾರಿಕಾ ಘಟಕಕ್ಕೆ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಬೀಗ ಹಾಕಿದ್ದಾರೆ.

ಲಕ್ಷ್ಮೀಕಾಂತ ಮೋಹನ ಶಿಂಧೆ ಮಾಲಿಕತ್ವದ ಸಿಂಧೆ ಟ್ರೇಡರ್ಸ್ ಕುರುಕಲು ತಿಂಡಿ ಮತ್ತು ಪಾಪಡಿ ತಯಾರಿಕಾ ಘಟಕಕ್ಕೆ ಇದೀಗ ಬೀಗ ಮುದ್ರೆ ಬಿದ್ದಿದೆ.

ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಪಡೆಯದೇ ಅನಧೀಕೃತವಾಗಿ ಕುರುಕಲು ತಿಂಡಿ ಮತ್ತು ಪಾಪಡಿ ತಯಾರಿಸಲಾಗುತ್ತಿತ್ತು. ಈ ವಿಷಯ ತಿಳಿದು ಘಟಕಕ್ಕೆ ಇಲಾಖೆಯ ಅಧಿಕಾರಿಗಳು ಕಳೆದ ದಿ.೨೨.೧೦.೨೦೧೮ ರಂದು ಭೇಟಿ ನೀಡಿ ಪರಿಶೀಲಿಸಿದ್ದರು.

ಈ ಸಂದರ್ಭದಲ್ಲಿ ಘಟಕದಲ್ಲಿ ಯಾವುದೇ ಸ್ವಚ್ಠತೆ ಇಲ್ಲದಿರುವುದು ಹಾಗೂ ಮುಂಜಾಗ್ರತಾ ಕ್ರಮಗಳ ಕೊರತೆ ಕಂಡು ಬಂದಿತ್ತು. ಅಲ್ಲದೇ ತಯಾರಿಸಿದ ಆಹಾರದ ಪೊಟ್ಟಣಗಳ ಮೇಲೆ ಉತ್ಪಾದನೆಯ ದಿನಾಂಕ, ಬಳಕೆಯ ಅವಧಿ, ಬ್ಯಾಚ್ ನಂಬರ ಇನ್ನಿತರ ಮಾಹಿತಿಗಳನ್ನು ಮುದ್ರಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿತ್ತು. ನಂತರ ಘಟಕದಲ್ಲಿ ಅಸುರಕ್ಷತೆ ಇರುವುದರಿಂದ ಆಹಾರ ತಯಾರಿಸದಂತೆ ಸೂಚನೆ ಕೂಡ ನೀಡಲಾಗಿತ್ತು. ಆದರೆ, ನಿಯಮ ಉಲ್ಲಂಘಿಸಿ ಮತ್ತೇ ಕುರುಕಲು ತಿಂಡಿ ಮತ್ತು ಪಾಪಡಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು.

ಈ ಹಿನ್ನಲೆಯಲ್ಲಿ ಪಾಪಡಿ ಘಟಕಕ್ಕೆ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಜಶೇಖರ ಪಾಳೇದವರ, ತಾಲೂಕಾ ಅಧಿಕಾರಿ ಬಿ.ಆರ್.ಪಾತ್ರೋಟ ಇನ್ನಿತರರು ತೆರಳಿ ಬೀಗ ಹಾಕಿ, ಇಲಾಖೆಯ ನಿಯಮಾವಳಿಗಳನ್ವಯ ಕಾನೂನು ಕ್ರಮ ಜರುಗಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *