ರಾಜ್ಯ

ವಿದ್ಯಾರ್ಥಿನಿಯರ ಗಣರಾಜ್ಯೋತ್ಸವ ಸಂಭ್ರಮಕ್ಕೆ ಆಘಾತ ….!

ಧಾರವಾಡ : ಇಲ್ಲಿಯ ಕೆ ಇ ಬೋರ್ಡ್ ಶಿಕ್ಷಣ ಸಂಸ್ಥೆಯ ಪಿಯುಸಿ ವಿದ್ಯಾರ್ಥಿನಿಯರು ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಲು ಭಾರೀ ಉತ್ಸುಕತೆ, ಸಡಗರ, ಸಂಭ್ರಮದಿಂದ ಆಗಮಿಸುತ್ತಿದ್ದ ವೇಳೆ ಕಾರವೊಂದು ಡಿಕ್ಕಿ ಹೊಡೆದ ಪರಿಣಾಮ 9 ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ.

ಬೆಳ್ಳಂಬೆಳಗ್ಗೆ ಈ ಭೀಕರ ಅಪಘಾತ ಕಂಡ ಧಾರವಾಡಿಗರು ಬೆಚ್ಚಿ ಬಿದ್ದಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದೆ.

ಡಿಸಿ ಬಂಗ್ಲೋ ಹತ್ತಿರ ಕಾರ್ ಚಲಾಯಿಸಿಕೊಂಡು ಬರುತ್ತಿದ್ದ ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಅರವಿಂದ ಹೆಬಸೂರ ಅವರು ಬ್ರೇಕ್ ಹಾಕಲು ಹೋಗಿ ಎಕ್ಸಲೇಟರ್ ಒತ್ತಿದ್ದರಿಂದ ಈ ದುರಂತ ಸಂಭವಿಸಿದೆ.

ಒಂಬತ್ತು ವಿದ್ಯಾರ್ಥಿನಿಯರ ಪೈಕಿ ಮೂವರಿಗೆ ಗಂಭೀರಗಾಯಗಳಾಗಿದ್ದು, ಪೂಜಾ ನಿಡಗುಂದಿ ಅವರ ಸ್ಥೀತಿ ಚಿಂತಾಜನಕ ವಾಗಿದೆ. ಅವಳಿಗೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ವೈದ್ಯರು ಈವರೆಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಇನ್ನೂಳಿದಂತೆ ಅನ್ನಪೂರ್ಣ ಚಲವಾದಿ ಅವರಿಗೆ ಕಾಲು ಮುರಿದಿದ್ದು, ಅವರನ್ನು ಎಸ್ ಡಿಎಂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಐವರಿಗೆ ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಧಾರವಾಡ ಸಂಚಾರ ಪೊಲೀಸ್ ಠಾಣೆಯ ಇನ್ಸ ಪೆಕ್ಟರ್ ಮುರುಗೇಶ ಚನ್ನಣ್ಣವರ ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.

ಈಗಾಗಲೇ ಈ ಕುರಿತು ಧಾರವಾಡ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಅರವಿಂದ ಹೆಬಸೂರ ಅವರನ್ನು ವಶಕ್ಕೆ ಪಡೆದುಕೊಳ‍್ಳಲಾಗಿದ್ದು, ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಸೇರಿದಂತೆ ಅನೇಕರು ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ಕಾರ್ ಬೈಕ್ ಡಿಕ್ಕಿಯಿಂದಾಗಿ ಒಂಬತ್ತು ವಿದ್ಯಾರ್ಥಿಗಳಿಗೆ ಗಾಯಗಳಾಗಿರುವುದು ಪೋಷಕರಿಗೆ ಆತಂಕಕ್ಕೀಡು ಮಾಡಿದೆ. ಗಣರಾಜ್ಯೋತ್ಸವ ಸಂಭ್ರಮ ಅವರಿಗೆ ಬೆಳ್ಳಂ ಬೆಳಗ್ಗೆ ಆಘಾತವನ್ನುಂಟು ಮಾಡಿದೆ.

Please follow and like us:

Leave a Reply

Your email address will not be published. Required fields are marked *