ಬೆಂಗಳೂರು : ಕಿಚ್ಚಗುತ್ತಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸ್ವೀಕರಿಸಿ 14 ಜನ ಸಾವನ್ನಪ್ಪಿದ ನಂತರ ಧಾರ್ಮಿಕ ದತ್ತಿ ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ.
ಇನ್ನೂ ಮುಂದೆ ದೇಗುಲದಲ್ಲಿ ಪ್ರಸಾದ ವಿತರಣೆಗೆ ಸ್ಥಳೀಯ ಆರೋಗ್ಯಾಧಿಕಾರಿಗಳ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ಈ ಕುರಿತಂತೆ ಖಡಕ್ ಆದೇಶ ಹೊರಡಿಸಿದೆ. ಅಲ್ಲದೆ, ರಾಜ್ಯದ ಎಲ್ಲ ದೇಗುಲದಲ್ಲಿ ಪ್ರಸಾದ ವಿತರಣೆಗೆ ಪರವಾನಿಗೆ ಪಡೆಯದೆ ವಿತರಣೆ ಮಾಡುವಂತಿಲ್ಲ ಎಂದು ತಿಳಿಸಿದೆ.
ಇದರ ಜೊತೆಗೆ ಅಡುಗೆ ಮನೆಯಲ್ಲಿ ಸಿಸಿ ಟಿ ವಿ ಅಳವಡಿಕೆ ಕಡ್ಡಾಯ ಮಾಡಿದೆ. ಅಡುಗೆಯವರು ಬಿಟ್ಟರೆ ಬೇರೆ ಯಾರು ಪ್ರವೇಶ ಮಾಡುವಂತಿಲ್ಲ. ಜೊತೆಗೆ ದೇವರಿಗೆ ನೈವೈದ್ಯ ನೀಡುವ ಮುನ್ನ ಪರಿಶೀಲನೆ ಮಾಡಿಯೇ ಆನಂತರ ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ.
ಈ ಬಗ್ಗೆ ಸ್ಥಳೀಯ ದೇವಾಲಯಗಳು ಮುಂಚಿತವಾಗಿಯೇ ನಮಗೆ ಮಾಹಿತಿ ಕೊಟ್ಟರೆ ನಾವು ಅದನ್ನು ಆರೋಗ್ಯ ಇಲಾಖೆ ಗಮನಕ್ಕೆ ತಂದು ಅನುಕೂಲ ಕಲ್ಪಿಸುತ್ತೇವೆ. ಜೊತೆಗೆ ಸ್ವಚ್ಛವಾದ ಪರಿಸರದಲ್ಲಿ ಅಡುಗೆ ತಯಾರಿಸಲು ಕೂಡ ಸಹಾಯವಾಗುತ್ತದೆ. ಈಗಾಗಲೇ ಇದು ಮುಜರಾಯಿ ದೇವಸ್ಥಾನದಲ್ಲಿ ಜಾರಿಯಲ್ಲಿದೆ. ಅದನ್ನು ಇತರೆ ದೇವಸ್ಥಾನಗಳಿಗೆ ವಿಸ್ತರಿಸಲಾಗಿದ್ದು, ಜಿಲ್ಲಾಡಳಿತದಿಂದ ಕೂಡ ಪರಿಶೀಲನೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಜಯಪ್ರಕಾಶ್ ತಿಳಿಸಿದ್ದಾರೆ.