ಧಾರವಾಡ : ಕಟ್ಟಡ ಕುಸಿತ ಪ್ರಕರಣದ ಪ್ರಮುಖ ಆರೋಪಿಯಾದ ಕಟ್ಟಡ ಇಂಜಿನಿಯರ್ ವಿವೇಕ್ ಪವಾರನನ್ನು ಮಾ. 25ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿ ಎರಡನೇ ಜೆ ಎಂಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿವೇಕ ಪವಾರ್ ನನ್ನು ಶುಕ್ರವಾರ ಮಧ್ಯಾಹ್ನ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ಈ ವೇಳೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವ ಅಗತ್ಯವಿರುವುದರಿಂದ ಆರೋಪಿ ವಿವೇಕ್ ಪವಾರನನ್ನು ಪೊಲೀಸ್ ವಶಕ್ಕೆ ನೀಡಬೇಕು ಎಂದು ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗಿತ್ತು,
ಪೊಲೀಸರ ಮನವಿ ಪರಿಗಣಿಸಿದ ಎರಡನೇ ಜೆ ಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ವಿವೇಕ್ ಪವಾರ್ ನನ್ನು ಮಾ. 25ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದರು.
ಇನ್ನೂಳಿದಂತೆ ಕಟ್ಟಡ ಮಾಲೀಕರಾದ ಗಂಗಪ್ಪ ಶಿಂತ್ರೆ, ರವಿ ಸಬರದ, ಬಸವರಾಜ ನಿಗದಿ, ಮಹಾಬಲೇಶ್ವರ ಪುರದನಗುಡಿ ಸೇರಿದಂತೆ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ಆಸ್ಪತ್ರೆಗೆ ಕರೆದುಕೊಂಡು ತಪಾಸಣೆ ನಡೆಸಿದರು.
ಬಳಿಕ ನಾಲ್ವರು ಆರೋಪಿಗಳನ್ನು ತಡರಾತ್ರಿ ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗಿ ಅವರ ಎದುರು ಹಾಜರು ಪಡಿಸಿ. ಹೆಚ್ಚಿನ ವಿಚಾರಣೆ ಹಾಗೂ ಸ್ಥಳ ಮಹಜರುಗಾಗಿ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ.
ಪೊಲೀಸರ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸುತ್ತಾರಾ ಅಥವಾ ನ್ಯಾಯಾಂಗ ವಶಕ್ಕೆ ನೀಡುತ್ತಾರಾ ಎಂಬುದು ಕಾದು ನೋಡಬೇಕಿದೆ.