ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಾರಿಗೆ ಕಲ್ಲು ತೂರಿದ ಘಟನೆ ಶುಕ್ರವಾರ ನಡೆದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕೆಲದುಷ್ಕರ್ಮಿಗಳು ಈ ಘಟನೆ ನಡೆದಿದೆ.
ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿದ ನಂತರ ಕ್ಷೇತ್ರದಲ್ಲಿ ಮಿಂಚಿನ ಸಂಚಲನವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರ ಅಭಿಮಾನಿಗಳ ನಡುವೆ ತಿಕ್ಕಾಟ ಆರಂಭಗೊಂಡಿದೆ.
ಇತ್ತೀಚೆಗಷ್ಟೆ ಕುಮಾರಸ್ವಾಮಿ ಎದುರು ಸುಮಲತಾ ಜಯಘೋಷ ಮೊಳಗಿಸಿದ್ದ ಅವರ ಅಭಿಮಾನಿಗಳೇ ಇಂದು ನಿಖಿಲ್ ಕಾರಿನ ಮೇಲೆ ಕಲ್ಲು ತೂರಾಟ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಪ್ರಚಾರ ಮಾಡಲು ನಿಖಿಲ್ ತೆರಳುತ್ತಿದ್ದ ವೇಳೆ ಈ ಕಲ್ಲು ತೂರಾಟ ನಡೆಸಲಾಗಿದೆ.
ರೋಡ್ ಶೋ ಮಾಡಿಕೊಂಡು ತೆರಳುತ್ತಿದ್ದ ಅವರ ವಾಹನದ ಹಿಂದೆ ಬರುತ್ತಿದ್ದ ಜೆಡಿಎಸ್ ಮುಖಂಡ ಜಗದೀಶ್ ಅವರ ಕಾರಿನ ಮೇಲೆ 10 ಜನರ ಗುಂಪು ಕಲ್ಲು ತೂರಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದುಕೊಂಡು ಉಳಿದವರಿಗಾಗಿ ಶೋಧ ನಡೆಸುತಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.