ಹುಬ್ಬಳ್ಳಿ : ಉತ್ತರ ಭಾಗದ ಲಕ್ಷಾಂತರ ಜನರ ಪಾಲಿನ ಚೇತನ ಶಕ್ತಿಯಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಆರ್. ಬಿ. ಪಾಟೀಲ (95) ಅವರು ಶನಿವಾರ ವಿಧೀವಶರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬ್ರೇನ್ ಹೇಮರೇಜ್ ನಿಂದ ಬಳಲುತ್ತಿದ್ದರೂ ಪ್ರತಿ ನಿತ್ಯ ಡಾ. ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆಗೆ ಆಗಮಿಸಿ ಅಲ್ಲಿಯ ವ್ಯವಸ್ಥೆಯನ್ನು ವೀಕ್ಷಿಸಿ, ಪರಿಶೀಲಿಸುತ್ತಿದ್ದರು.
ಕಳೆದ ಹಲವು ದಿನಗಳಿಂದ ಚೇತರಿಸಿಕೊಳ್ಳುತ್ತಿದ್ದ ಅವರು ಇಂದು ವಯೋಸಹಜ ಕಾಯಿಲೆಯಿಂದ ಇಹ ಲೋಕ ತ್ಯಜಿಸಿದರು.
ಅವರಿಗೆ ವೈದ್ಯರಾದ ಡಾ. ಬಸವರಾಜ ಪಾಟೀಲ, ಡಾ. ಸರೋಜಾ ಬೈರಿ, ಡಾ. ಶೈಲಾ ಮುದರಡ್ಡಿ ಮಕ್ಕಳಿದ್ದಾರೆ. ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೂಲತಃ ಬಸವನ ಬಾಗೇವಾಡಿ ತಾಲೂಕಿನ ಕವಲಗಿ-ಅಂಗಡಿಯವರಾಗಿದ್ದ ಅವರು ಹುಬ್ಬಳ್ಳಿಯಲ್ಲಿ ಹಲವು ದಶಕಗಳ ಕಾಲ ಕೋ ಆಪರೇಟಿವ್ ಆಸ್ಪತ್ರೆ ನಡೆಸಿ ನಾಡಿನ ಮನೆ ಮಾತಾಗಿದ್ದರು.
ಅನಂತರ ಡಾ. ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಿ ಉತ್ತರ ಕರ್ನಾಟಕ ಭಾಗದ ಏಕೈಕ ಕ್ಯಾನ್ಸರ್ ಆಸ್ಪತ್ರೆ ಎಂಬ ಖ್ಯಾತಿ ಗಳಿಸಿದ್ದರು.
ಅವರ ಸಾಧನೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹತ್ತು ಹಲವು ಪ್ರಶಸ್ತಿಗಳು ಸಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಡಾ. ಆರ್.ಬಿ ಪಾಟೀಲ ಅವರ ಅಂತ್ಯಕ್ರಿಯೆಯೂ ಬಸವನ ಬಾಗೇವಾಡಿ ತಾಲೂಕಿನ ಕವಲಗಿ-ಅಂಗಡಿ ತೋಟದಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.