ನವದೆಹಲಿ PRAJAKIRAN.COM : ಸುಪ್ರೀಂಕೋರ್ಟ್ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಎಲ್ಲ ಅನರ್ಹ 17 ಶಾಸಕರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ತಮ್ಮ ಶಿಷ್ಯಂದಿರನ್ನು ಕಣಕ್ಕೆ ಇಳಿಯದಂತೆ ನೋಡಿಕೊಳ್ಳಲು ಹಾಗೂ ತಮಗೆ ಬಿಜೆಪಿ ಟಿಕೇಟ್ ನೀಡುವಂತೆ ಸಹಕರಿಸಬೇಕು ಎಂದು ಅನರ್ಹ ಶಾಸಕರು ಸಂತೋಷ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಆ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಮುಖಂಡರು ಆಗಿರುವ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರುವ ಮೂಲಕ ಬಿಜೆಪಿ ಪಾಳೇಯದಲ್ಲಿ ವಿಶ್ವಾಸ ಮೂಡಿಸಲು ಯತ್ನಿಸಿದ್ದಾರೆ.
ಭೇಟಿ ನಂತರ ಹೊರ ಬಂದ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ.
ನಾವು ಬಿಜೆಪಿ ಸೇರಲು ನಿರ್ಧರಿಸಿದ್ದೇವೆ. ಆನಂತರ ಟಿಕೇಟ್ ವಿಚಾರ ಎಂದು ನುಣುಚಿಕೊಂಡಿದ್ದಾರೆ. ಮೊದಲು ಬಿಜೆಪಿ ಸೇರ್ಪಡೆ ಆಗುತ್ತೇವೆ. ಆನಂತರ ಟಿಕೇಟ್ ಬಗ್ಗೆ ನೋಡೋಣ ಎಂದು ಸಮಜಾಯಿಸಿ ನೀಡಿದ್ದಾರೆ.
ಈ ಹಿಂದೆ ಅನರ್ಹ ಶಾಸಕರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಸಂತೋಷಜಿ ಅವರನ್ನು ಕದ್ದು ಮುಚ್ಚಿ ಭೇಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.