ರಾಜ್ಯ

ಅವಶೇಷಗಳಡಿ ಸಿಲುಕಿದ ಜೀವಗಳಿಗೆ ಮರುಗಿದ ಸಚಿವ ಶಿವಳ್ಳಿ

ಹುಬ್ಬಳ್ಳಿ : ಕಳೆದ ಮಂಗಳವಾರ ಧಾರವಾಡ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿ ಇದ್ದ ಕಟ್ಟಡ ಕುಸಿದ ವಿಷಯ ತಿಳಿದ ಕೂಡಲೇ ತಡಮಾಡದೆ ಸ್ಥಳಕ್ಕೆ ಆಗಮಿಸಿದ್ದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ಕಾಳಜಿಯಿಂದ ನಿರ್ವಹಿಸಿದ್ದರು.

ಘಟನೆ ನಡೆದ ದಿನದಿಂದ ಪ್ರತಿ ದಿನವೂ ತಮ್ಮ ಆರೋಗ್ಯ ಲೆಕ್ಕಿಸದೆ, ಬಿಸಿಲು, ಧೂಳು ಎನ್ನದೆ ಜನರ ನಡುವಿನಲ್ಲೇ ಜನಸಾಮಾನ್ಯರಂತೆ ನಿಂತು ಅವಶೇಷಗಳಡಿ ಸಿಲುಕಿದವರ ರಕ್ಷಣೆಯ ಕಾರ್ಯ ಪರಿಶೀಲಿಸುತ್ತಿದ್ದರು.

ಸಂತ್ರಸ್ತರ ಬಂಧುಗಳ ನೋವು, ಆಕ್ರಂದನ ಆಲಿಸಿ ಸಮಾಧಾನ ಪಡಿಸುತ್ತಾ ಮಮ್ಮಲ ಮರುಗಿದ್ದರು.

ಅವಶೇಷಗಳ ಅಡಿಯಿಂದ ಕೆಲವು ವ್ಯಕ್ತಿಗಳು ಮೊಬೈಲ್ ಮೂಲಕ ಸಂಪರ್ಕಿಸಿ ರಕ್ಷಿಸಲು ಭಿನ್ನವಿಸಿಕೊಂಡಿದ್ದನ್ನು ಕೇಳಿ ತೀವ್ರ ಕಾಳಜಿ ತೋರಿದ್ದರು.

ಸಚಿವರು ರಕ್ಷಣಾ ಕಾರ್ಯಚರಣೆಯ ಪ್ರತಿ ಹಂತದಲ್ಲಿಯೂ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಸ್ವತಃ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸಚಿವರು ಅದನ್ನು ಲೆಕ್ಕಿಸದೇ ಶುಕ್ರವಾರ ಬೆಳಿಗ್ಗೆಯಿಂದಲೇ ದುರ್ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದ್ದರು.

ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಬಳಲಿದಂತೆ ಕಂಡು ಬಂದ ಸಚಿವರಿಗೆ ವಿಶ್ರಾಂತಿ ಪಡೆಯಲು ಅವರ ಆಪ್ತ ಸಹಾಯಕರು, ಅಭಿಮಾನಿಗಳು ಸಲಹೆ ನೀಡಿದರೂ ಕೂಡ ಶಿವಳ್ಳಿಯವರು ವಿಶ್ರಾಂತಿಗೆ ಮುಂದಾಗಲಿಲ್ಲ. ಕೆಲವು ಮಾಧ್ಯಮ ಪ್ರತಿನಿಧಿಗಳು ದುರಂತ ನಡೆದ ಸ್ಥಳದ ದೃಶ್ಯಿಕರಣಕ್ಕಾಗಿ ವಿವಿಧ ಸ್ಥಳಗಳಲ್ಲಿ ನಿಂತುಕೊಳ್ಳಲು ಹೇಳಿದಾಗ “ನಾನು ಹೃದಯರೋಗಿಯಪ್ಪಾ… ಹೆಚ್ಚು ಆಯಾಸ ತ್ರಾಸು ಉಂಟುಮಾಡುತ್ತದೆ” ಎಂದು ಮುಚ್ಚುಮರೆಯಿಲ್ಲದೇ ಹೇಳಿದ್ದನ್ನೂ ಪ್ರತ್ಯಕ್ಷದರ್ಶಿಗಳು ಸ್ಮರಿಸುತ್ತಿದ್ದಾರೆ.

ಕಟ್ಟಡದ ಅವಶೇಷಗಳ ಅಡಿ ಸಿಲುಕಿದ ಜೀವಗಳಿಗೆ ಮರುಗಿದ ಸಚಿವರೇ ತಮ್ಮ ಜೀವಕಳೆದುಕೊಂಡಿದ್ದು ಕಾರ್ಯಾಚರಣೆಯಲ್ಲಿ ನಿರತರಾದವರಲ್ಲಿ ದಿಗಭ್ರಮೆ ಮೂಡಿಸಿದೆ.

Please follow and like us:

Leave a Reply

Your email address will not be published. Required fields are marked *