ಬೆಂಗಳೂರು : ವಿಸ್ಮಯ ಸಿನಿಮಾದಲ್ಲಿ ನಟಿಸುವ ವೇಳೆ ನಟ ಅರ್ಜುನ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ ನಟಿ ಶೃತಿ ಹರಿಹರನ್ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಒಂದೂವರೆ ಕೋಟಿ ರೂಪಾಯಿ ಬೇಡಿಕೆ ಇಟ್ಟಿರುವುದು ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಬಿರುಗಾಳಿಯನ್ನೇ ಬಿಸಿದೆ.
ರಾಮ್ ಹೆಸರಿನಲ್ಲಿ ಕರೆ ಮಾಡಿರುವ ವ್ಯಕ್ತಿ ತಾನು ಶೃತಿ ಹರಿಹರನ್ ಅವರ ಆಪ್ತನಾಗಿದ್ದು, ಅವರೊಂದಿಗೆ ಮಾತನಾಡಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ. ಈ ಪ್ರಕರಣ ಮುಚ್ಚಿ ಹಾಕಬೇಕಾದರೆ, ಅಲ್ಲದೆ ಪೊಲೀಸ್ ಠಾಣೆ ಮೆಟ್ಟಿಲು ಹಾಗೂ ಕಾನೂನು ಮೊರೆ ಹೋಗಬಾರದು ಎಂದಾದರೆ ಒಂದೂವರೆ ಕೋಟಿ ನೀಡಿ ಎಂದು ಹೇಳಿಕೊಂಡಿದ್ದಾನೆ.
ಈ ಬೇಡಿಕೆ ಇಟ್ಟಿರುವ ಧ್ವನಿ ಮುದ್ರಿಕೆ ನನ್ನ ಬಳಿ ಇದೆ ಎಂದು ನಟ ಅರ್ಜುನ ಸರ್ಜಾ ಆಪ್ತ ಪ್ರಕಾಶ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದು, ಅಲ್ಲದೆ ಈ ಬಗ್ಗೆ ಶೀಘ‍್ರದಲ್ಲಿಯೇ ಆಡಿಯೋ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದು ಈಗ ಹೊಸ ತಿರುವು ಪಡೆದಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಿದ್ದು, ಮೀ ಟೂ ಅಭಿಯಾನದ ದಿಕ್ಕು ತಪ್ಪುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇದಕ್ಕೆ ಶೃತಿ ಹರಿಹರನ್ ಹಾಗೂ ನಟ ಅರ್ಜುನ ಸರ್ಜಾ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
