ಧಾರವಾಡ prajakiran.com : ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತರಗತಿಯ ಪಠ್ಯಗಳ ಜೊತೆಗೆ ವಿಷಯ ಪರಿಣಿತರ ಮಾರ್ಗದರ್ಶನವನ್ನು ಪಡೆದು ಪರೀಕ್ಷೆಯಲ್ಲಿ ಸಾಧನೆ ಮಾಡಬೇಕೆಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಹೇಳಿದರು.
ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಲಾಸಿಕ್ ಕೆ.ಎ.ಎಸ್. ಮತ್ತು ಐ.ಎ.ಎಸ್. ಸ್ಟಡಿ ಸರ್ಕಲ್ ಹಾಗೂ ಸ್ಪರ್ಧಾ ಸ್ಫೂರ್ತಿ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಕ್ಲಾಸಿಕ್ ಸಂಸ್ಥೆಯಲ್ಲಿ ನಡೆದ ಮೂರು ದಿನಗಳ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಧಾರವಾಡ ಶಹರ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿ ಎ. ಇ. ಖಾಜಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆ ಇಲ್ಲದೇ ಆತ್ಮಸ್ಥೈರ್ಯದಿಂದ ಪರೀಕ್ಷೆಗಳನ್ನು ಎದುರಿಸಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂದು ಹೇಳಿದರು.
ಸಮಯ ಹೊಂದಾಣಿಕೆ ಹಾಗೂ ಶಿಸ್ತುಬದ್ಧ ಅಧ್ಯಯನದೊಂದಿಗೆ ವಿಷಯಗಳ ಪುನರ್ ಮನನ ಮಾಡಿಕೊಳ್ಳುವ ಮೂಲಕ ಕಠಿಣ ವಿಷಯಗಳನ್ನು ಸುಲಭವಾಗಿ ಗ್ರಹಿಸಿಕೊಳ್ಳುವತ್ತ ಗಮನಹರಿಸಬೇಕೆಂದು ಹೇಳಿದರು.
ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಗೇರ ಮಾತನಾಡಿ, ಮನಸ್ಸು ಮಾಡಿದರೆ ಅಸಾಧ್ಯವೆಂಬುದು ಯಾವುದೂ ಇಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ತಿರುವು ಆಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಶೃದ್ಧೆ ಮತ್ತು ಸತತ ಅಧ್ಯಯನದ ಮೂಲಕ ಎದುರಿಸಲು ವಿವಿಧ ಮೂಲಗಳಿಂದ ಜ್ಞಾನ ಸಂಗ್ರಹಿಸಿಕೊಳ್ಳಬೇಕು ಎಂದರು.
ಈ ದಿಸೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿರುವ ಕ್ಲಾಸಿಕ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ಪರ್ಧಾ ಸ್ಫೂರ್ತಿ ಹಿರಿಯ ಸಂಪಾದಕ ಹಾಗೂ ಮುಖ್ಯ ಆಡಳಿತಾತ್ಮಕ ಸಂಯೋಜಕ ಐ. ಜಿ. ಚೌಗಲಾ ಮಾತನಾಡಿ, ಕ್ಲಾಸಿಕ್ ಸಂಸ್ಥೆಯಿಂದ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಸ್.ಎಸ್.ಎಲ್.ಸಿ. ಯಿಂದಲೇ ವಿದ್ಯಾರ್ಥಿಗಳಲ್ಲಿ ಸ್ಫರ್ಧಾತ್ಮಕತೆಯ ಹಸಿವನ್ನು ಹುಟ್ಟಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿದ್ದು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಕಲಘಟಗಿ ಬಿ.ಇ.ಓ. ಉಮಾದೇವಿ ಬಸಾಪೂರ, ಶೈಕ್ಷಣಿಕ ಮಾರ್ಗದರ್ಶಕ ಡಾ. ಎಂ. ವೈ. ಸಾವಂತ, ಪ್ರಾಚಾರ್ಯ ಎಚ್. ಎಂ. ಉಡಕೇರಿ ಅತಿಥಿಗಳಾಗಿದ್ದರು.
ಸಂಜಯ ಮಾಳಿ, ಮಂಜುನಾಥ ಮರಿತಮ್ಮನವರ, ಅಶೋಕ ಶಿರಹಟ್ಟಿ, ಉದಯ ಕೊಕಟನೂರ, ರವಳನಾಥ ಪಾಟೀಲ ಸೇರಿದಂತೆ ಇತರರು ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ವಿಷಯಗಳನ್ನು ಬೋಧಿಸಿದರು.
ಸಂಯೋಜಕರಾದ ಪ್ರಮೋದ ಬಡಿಗೇರ ಹಾಗೂ ಆನಂದ ಬಾದಾಮಿ ಇದ್ದರು. ಕ್ಲಾಸಿಕ್ ಪದವಿಪೂರ್ವ ಕಾಲೇಜಿನ ಸಂಯೋಜಕಿ ಅಶ್ವಿನಿ ಎಸ್. ಕೊಟ್ಲಿ ಸ್ವಾಗತಿಸಿದರು. ಉಪನ್ಯಾಸಕ ರುದ್ರಗೌಡ ಉಪ್ಪಿನ, ನಿರೂಪಿಸಿ ವಂದಿಸಿದರು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.