ವಿಶಾಖಪಟ್ಟಣಂ : ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ್ ರಡ್ಡಿ ಪುತ್ರ ಹಾಗೂ ವೈ ಎಸ್ ಆರ್ ಸಿಪಿ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರಡ್ಡಿ ಮೇಲೆ ಚಾಕು ಇರಿಯಲಾಗಿದೆ
ವಿಶಾಖಪಟ್ಟಣಂನಿಂದ ಹೈದ್ರಾಬಾದ್ ಗೆ ತೆರಳಬೇಕಾಗಿದ್ದ ಸಂದರ್ಭದಲ್ಲಿ ಜಗನ್ ಮೋಹನ್ ರಡ್ಡಿ ಅವರ ಮೇಲೆ ಈ ದಾಳಿ ನಡೆದಿದೆ.
ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಯುವಕ ಜಗನ್ ಮೋಹನ ರಡ್ಡಿ ಅವರ ಬಲ ಗೈಗೆ ಚಾಕು ಇರಿದಿದ್ದು, ವಿಶಾಖ ಪಟ್ಟಣಂ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.
ಇದರಿಂದಾಗಿ ವೈ ಎಸ್ ರಾಜಶೇಖರ್ ರಡ್ಡಿ ಹಾಗೂ ಜಗನ್ ಮೋಹನರಡ್ಡಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಆತಂಕಗೊಂಡಿದ್ದು, ಏನಾಗಿದೆ ಎಂದು ಗಾಬರಿಯಾಗಿದ್ದಾರೆ.
ಹೆಚ್ಚಿನ ಭದ್ರತೆಯಿರುವ ವಿಶಾಖ ಪಟ್ಟಣಂ ವಿಮಾನ ನಿಲ್ದಾಣದಲ್ಲಿಯೇ ಈ ರೀತಿ ಚಾಕು ಇರಿದಿರುವುದು ಪೊಲೀಸರನ್ನು ಕಂಗಾಲಾಗಿಸಿದೆ.
ಅಲ್ಲದೆ, ತಕ್ಷಣ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ದಾಳಿ ಮಾಡಿದ್ದಾನೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಆಂಧ್ರ ಪ್ರದೇಶದ ಸದ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಎದುರಾಳಿ ನಾಯಕನಾಗಿದ್ದು, ಈ ಘಟನೆ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗುವ ಸಾಧ್ಯತೆಯಿದೆ.