ಧಾರವಾಡ : ಸತ್ಯ ಮಾತನಾಡುವುದು ಸನ್ಯಾಸಿಯ ಮೊದಲ ಲಕ್ಷಣವಾಗಿದ್ದು, ಜಗತ್ತಿನ ನಿಜಾರ್ಥದ ಸನ್ಯಾಸಿ ಸ್ವಾಮಿ ವಿವೇಕಾನಂದರು. ಅವರನ್ನು ಆಗಿನ ಕಾಲದಲ್ಲಿಯೇ ಬಾಲಗಂಗಾಧರನಾಥ ತಿಲಕರು ತಮ್ಮ ಕೇಸರಿ ಪತ್ರಿಕೆಯಲ್ಲಿ ಮಹಾತ್ಮಗಾಂಧಿಯವರನ್ನು ರಾಷ್ಟ್ರಪಿತ ಎಂದು ಘೋಷಣೆ ಮಾಡುವ ಮುನ್ನವೇ ಭಾರತೀಯತೆಯ ಭಾವನೆಗಳ ನಿಜವಾದ ಪಿತಾಮಹ ಎಂದು ಬಣ್ಣಿಸಿದ್ದರು ಎಂದು ಧಾರವಾಡದ ಮನಗುಂಡಿಯ ಶ್ರೀ ಗುರುಬಸವಮಹಾಮನೆಯ ಬಸವಾನಂದ ಸ್ವಾಮೀಜಿ ಹೇಳಿದರು.
ಅವರು ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಬೇಂದ್ರೆ ನಗರ ಕ್ರಾಸ್ ಬಳಿ ಜನ ಜಾಗೃತಿ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 156ನೇ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ಹಾಗೂ ಚಿಂತನೆ ಇಂದಿಗೂ ಪ್ರಸ್ತುತವಾಗಿದ್ದು, ಯುವ ಜನಾಂಗ ಅವರ ಅನುಕರಣೆ ಮಾಡಬೇಕು. ಬುದ್ದ, ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದರಂತಹ ಪುಣ್ಯ ಪುರುಷರನ್ನು ಯಾವುದೇ ಜಾತಿ ಮತ ಪಂಥಕ್ಕೆ ಸೀಮಿತಗೊಳಿಸಬಾರದು ಎಂದು ಸಲಹೆ ನೀಡಿದರು,
ಸ್ವಾಮಿ ವಿವೇಕಾನಂದರು ಅಂದಿನ ದಿನಗಳಲ್ಲಿಯೇ ಪುಟಬಾಲ್ ಹಾಗೂ ಭಗವದಗೀತೆ ಎರಡಲ್ಲಿ ಯಾವುದೇ ಆಯ್ಕೆ ಮಾಡಿಕೊಳ್ಳುತ್ತಿರಿ ಎಂದು ಕೇಳಿದಾಗ ಪುಟಬಾಲ್ ಅಂದಿದ್ದರು. ಮೊದಲು ಕ್ರೀಡೆಗೆ ಆದ್ಯತೆ ನೀಡಿದ್ದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾದ ನಂತರ ತಾನಾಗಿಯೇ ಎಲ್ಲವೂ ಅಧ್ಯಯನ ಮಾಡಲು ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತದೆ ಎಂಬುದನ್ನು ಮರೆಯಬಾರದು ಎಂದರು.
ನಮ್ಮ ಜನತೆ ಸತ್ಯದ ಆರಾಧಕರಾಗಬೇಕು. ನಮ್ಮ ಎಲ್ಲ ಗುರುಗಳು ಹೇಳುವುದು ಸತ್ಯ ಮೇಯ ಜಯತೆ . ಸ್ವಾಮಿ ವಿವೇಕಾನಂದರ ಮಾತು ಇಂದಿಗೂ ಪ್ರೇರಣೆಯಾಗಿ ಉಳಿದಿವೆ. ಹೀಗಾಗಿ ಅವರು ಯುಗ ಪುರುಷರು. ಜಗತ್ತಿನ ಬಹುತೇಕ ಜನರು ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿದ್ದಾರೆ.
ರಾಕ್ ಫೆಲ್ಲರ್ ವಿಶ್ವದ ಶ್ರೀಮಂತ ಆಗಿನ ಕಾಲದಲ್ಲಿ ಪ್ರೇರಿತಾಗಿದ್ದ. ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿ ೨೬ ವರ್ಷಗಳ ಕಾಲ ಒಂದೇ ಒಂದೇ ಕೊಠಡಿಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಸ್ವಾಮಿ ಅರವಿಂದರು ತಪಸ್ ಶಕ್ತಿಯಾಗಿದ್ದರೆ, ಫ್ರಾನ್ಸ್ ನಿಂದ ಬಂದ ಮದರ್ ಕ್ರಿಯಾ ಶಕ್ತಿ ಆದರು. ಕೋಟ್ಯಾಂತರ ರೂಪಾಯಿ ತಂದು ಪಾಂಡಿಚೇರಿಯಲ್ಲಿ ಅರವಿಂದೋ ಆಶ್ರಮ ಕಟ್ಟಿದರು. ಇಂದಿಗೂ ಸ್ವಾಮಿ ವಿವೇಕಾನಂದರು ಒಂದು ಚಲನಾಶಕ್ತಿಯಾಗಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ನಾವು ನೀವೆಲ್ಲಾ ಧೀರ ವೀರ ದೇಶ ಭಕ್ತರಾಗಿ ಬಾಳೋಣ, ಸ್ವಾಮಿ ವಿವೇಕಾನಂದರ ಕನಸಿನ ಸ್ವಸ್ಥ, ಸ್ವಚ್ಛ, ಸತ್ಯ ಭಾರತ ನಿರ್ಮಾಣ ಮಾಡಲು ಶ್ರಮಿಸೋಣ ಎಂದು ಬಸವಾನಂದ ಸ್ವಾಮೀಜಿ ಕರೆ ನೀಡಿದರು.
ಧಾರವಾಡದ ಮಾಜಿ ಶಾಸಕ ಎ.ಬಿ. ದೇಸಾಯಿ ಮಾತನಾಡಿ, ಇಂದಿನ ಯುವ ಜನಾಂಗಕ್ಕೆ ಅಧ್ಯಯನ ಕೊರತೆ ಕಾಡುತ್ತಿದೆ. ಹಿಂದು ಧರ್ಮದ ಪರಂಪರೆ, ಸಂಸ್ಕೃತಿಯ ಅಧ್ಯಯನ ಮಾಡಬೇಕು. ರಾಜಕೀಯ ಬೂಟಾಟಿಕೆ, ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಣ ಸಾಧಿಸಲು ದೈವ ಶಕ್ತಿ ಬೇಕು ಎಂದರು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ಸ್ವಾಮಿ ವಿವೇಕಾನಂದರ ಕುರಿತು ಬಾಲ್ಯದಿಂದಲೇ ಪ್ರಬಂಧ ಬರೆಯುತ್ತ ಬಂದಿದ್ದರಿಂದ ಇಂದು ನಾವು ಯುವಸಮುದಾಯ ಸಂಘಟಿತರಾಗಿ 156ನೇ ಜಯಂತಿ ಪ್ರಯುಕ್ತ ದೊಡ್ಡ ಪ್ರಮಾಣದ ಕಾರ್ಯಕ್ರಮ ಆಯೋಜಿಸಲು ಪ್ರೇರಣೆಯಾಗಿದೆ.
ಅವರಿಂದ ಸುಭಾಸಚಂದ್ರಬೋಸ್ ಪ್ರೇರಿತರಾಗಿ ಆಜಾದ್ ಹಿಂದ್ ಸಂಘಟನೆ ಕಟ್ಟಿದರೆ, ಮಹಾತ್ಮ ಗಾಂಧಿಯವರು ಅವರ ಆಶ್ರಮಕ್ಕೆ ಭೇಟಿ ನೀಡಿ ಸಾಕಷ್ಟು ಪ್ರೇರಿತರಾಗಿದ್ದರು. ಅದೇ ರೀತಿ ಜೆಮ್ ಶೆಟಜಿ ಟಾಟಾ, ಅಣ್ಣಾಹಜಾರೆ ಅಂತಹವರು ಪ್ರೇರಣೆಯಾಗಿ ಇಂದು ಸುಂದರ ಸಮಾಜ ನಿರ್ಮಿಸಲು ಶ್ರಮಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಕನಸಿನ ಭವ್ಯ ಭಾರತ ಆರೋಗ್ಯಕರ ಭಾರತ ನಿರ್ಮಾಣ ಮಾಡಲು ಶ್ರಮಿಸೋಣ ಎಂದರು.
ಇದೇ ವೇಳೆ ಎರಡು ವರ್ಷದ ಕಂದಮ್ಮಗಳಿಂದ ಹಿಡಿದು 10 ವರ್ಷದ ವರೆಗಿನ ಹತ್ತಾರು ಮಕ್ಕಳು ಸ್ವಾಮಿ ವಿವೇಕಾನಂದರ ಛದ್ಮವೇಷ ಧರಿಸಿ ಸಾವಿರಾರು ಜನರ ಗಮನ ಸೆಳೆದರು. ನೂರಾರು ಮಕ್ಕಳು ಸ್ವಾಮಿವಿವೇಕಾನಂದರ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೆ ಜನಜಾಗೃತಿ ಸಂಘದ ವತಿಯಿಂದ ಪ್ರಮಾಣ ಪತ್ತ ಹಾಗೂ ಬಹುಮಾನ ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಬಿ.ಬಿ. ಮಾಶ್ಯಾಳ, ನಿವೃತ್ತ ಉಪನ್ಯಾಸಕ ಈರಣ್ಣ ಅಗಳಗಟ್ಟಿ, ಕೆಸಿಡಿ ಉಪನ್ಯಾಸಕ ಕೆ.ಕೋಟ್ರೇಶ್, ಹಿರಿಯರಾದ ಸಿ.ಎಸ್. ಪಾಟೀಲ.ಬಿ.ಜಿ. ಕಮತಿ, ತಿಮ್ಮೋಲೆ, ಸದಾನಂದ ಪರೋಟಿ, ಸುರೇಶ ಪವಾರ, ಸುಮಂಗಲಾ ಬಸವರಾಜ ಕೊರವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರವೀಣ ಪ್ರಭು ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕುಮಾರ ಅಗಸಿಮನಿ ಸ್ವಾಗತಿಸಿದರು. ಸ್ವರೂಪ ಅಗಳಗಟ್ಟಿ ನಿರೂಪಿಸಿದರು. ಎನ್.ಸಿ. ಪಾಟೀಲ ವಂದಿಸಿದರು.