ಧಾರವಾಡ PRAJAKIRAN.COM : ೨೦೧೪ರ ಕೆಎಎಸ್ ಅಧಿಕಾರಿ ಸಂತೋಷಕುಮಾರ ಬಿರಾದಾರ ಅವರು ಧಾರವಾಡ ತಾಲೂಕಿನ ನೂತನ ತಹಶೀಲ್ದಾರರಾಗಿ ನವೆಂಬರ ೨೫ರಂದು ಹಿಂದಿನ ತಹಶಿಲ್ದಾರ ಪ್ರಕಾಶ ಕುದರಿ ಅವರಿಂದ ಅಧಿಕಾರ ಸ್ವೀಕರಿಸಿದರು.
ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೆವಾಡಿ ತಾಲೂಕಿನ ಅಂಗಡಗೇರಿ ಗ್ರಾಮದ ಸಂತೋಷಕುಮಾರ ಅವರು ಪಶುವೈದ್ಯಕೀಯ ಪದವಿಧರರಾಗಿದ್ದಾರೆ. ಆಡಳಿತ ಸೇವೆಗೆ ಸೇರುವ ಮೊದಲು ೨೦೦೮ರಿಂದ ೨೦೧೪ರವರೆಗೆ ಬೆಳಗಾವಿ, ಬಾಗಲಕೋಟದಲ್ಲಿ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
೨೦೧೪ರಲ್ಲಿ ಕರ್ನಾಟಕ ಆಡಳಿತ ಸೇವೆಗೆ ಸೇರಿದ ಇವರು ಬಾಗಲಕೋಟ ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ ಕಚೇರಿಯಲ್ಲಿ ಪ್ರೋಬೆಷನರಿ ಸೇವಾ ಅವಧಿ ಪೂರೈಸಿದ್ದಾರೆ.
ನಂತರ ಬಾಗಲಕೋಟ, ಚಿಕ್ಕೊಡಿ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸರ್ಕಾರದ ವರ್ಗಾವಣೆ ಆದೇಶದ ಹಿನ್ನೆಲೆಯಲ್ಲಿ ಪ್ರಕಾಶ ಕುದರಿ ಅವರಿಂದ ತೆರವಾದ ಸ್ಥಾನಕ್ಕೆ ಧಾರವಾಡ ತಹಶೀಲ್ದಾರರಾಗಿ ಈಗ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದಿನ ಧಾರವಾಡದ ತಹಸೀಲ್ದಾರ್ ಪ್ರಕಾಶ ಕುದರಿ ಅವರು ಧಾರವಾಡ ಉಪವಿಭಾಗಾಧಿಕಾರಿ ಕಚೇರಿಗೆ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಇತ್ತೀಚೆಗೆ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.