ರಾಜ್ಯ

ಮಂತ್ರಿಗಿರಿಗಾಗಿ ಟೆಂಪಲ್ ರನ್ ಆರಂಭಿಸಿದ ನಾಲ್ವರು ಆಕಾಂಕ್ಷಿಗಳು

ಬೆಂಗಳೂರು Prajakiran.com : ರಾಜ್ಯದ ಬಿಜೆಪಿ ಸರಕಾರದಲ್ಲಿ ಶತಾಯ ಗತಾಯ ಮಂತ್ರಿಗಿರಿ ಪಡೆಯಲೇಬೇಕು ಎಂದು ಪಣತೊಟ್ಟಿರುವ ನಾಲ್ವರು ಬಿಜೆಪಿ ಶಾಸಕರು ಇದೀಗ ಟೆಂಪಲ್ ರನ್ ಆರಂಭಿಸಿದ್ದಾರೆ.

ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ರಾಣೆಬೆನ್ನೂರ ಮಾಜಿ ಶಾಸಕ ಆರ್. ಶಂಕರ್ ಮಂತ್ರಿಗಿರಿಗಾಗಿ ಟೆಂಪಲ್ ರನ್ ಆರಂಭಿಸಿದ ನಾಲ್ವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿರುವ ಬೆಳಗಾವಿಯ ಮೂವರು ಬಿಜೆಪಿ ಶಾಸಕರು ಹಾಗೂ ಅವರಿಗೆ ಈ ಹಿಂದಿನ ರಾಣೆಬೆನ್ನೂರು ಮಾಜಿ ಶಾಸಕ ಆರ್. ಶಂಕರ್ ಅವರು ಒಟ್ಟಿಗೆ ಪ್ರಯಾಣ ಬೆಳೆಸಿದ್ದಾರೆ.

ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಮೂವರು ಪ್ರಭಾವಿ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಇನ್ನೊಬ್ಬರು ವಿಧಾನ ಪರಿಷತ್ ಸದಸ್ಯರಾಗಿ ಮೇಲ್ಮನೆ ಪ್ರವೇಶಿಸಿ ಆನಂತರ ಸಚಿವ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.

ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ, ಆರ್. ಶಂಕರ್ ಅವರು ಮೊದಲಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ, ಅಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಆನಂತರ ನಂಜನಗೂಡಿಗೆ ತೆರಳಿ ಅಲ್ಲಿ ನಂಜುಂಡೇಶ್ವರನ ಮೊರೆ ಹೋಗಲಿದ್ದಾರೆ.

ಈಗಾಗಲೇ ಖಾಲಿ ಉಳಿದಿರುವ 16 ಸಚಿವ ಸ್ಥಾನದ ಪೈಕಿ ಕೇವಲ 11 ಶಾಸಕರಿಗೆ ಮಂತ್ರಿಗಿರಿ ನೀಡಲು ಬಿಜೆಪಿ ಉದ್ದೇಶಿಸಿರುವ ಹಿನ್ನಲೆಯಲ್ಲಿ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಸಚಿವ ಸ್ಥಾನ ಇಲ್ಲ.

ಅವರಿಬ್ಬರಿಗೆ ಕೇವಲ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಚಿಂತನೆ ನಡೆಸಿದ ಹಿನ್ನಲೆಯಲ್ಲಿ ಈ ಬೆಳೆವಣಿಗೆ ನಡೆದಿದೆ ಎನ್ನಲಾಗಿದೆ.

ಅಲ್ಲದೆ, ಅವರನ್ನು ಮಂತ್ರಿ ಸ್ಥಾನದಿಂದ ಕೈ ಬಿಟ್ಟರೆ ಒಗ್ಗಟ್ಟು ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಈ ನಾಲ್ವರು ಒಟ್ಟಿಗೆ ತೆರಳಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.

ಇದಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಯಾವ ರೀತಿ ಸ್ಪಂದಿಸುತ್ತದೆ. ಸಚಿವ ಸ್ಥಾನದ ಆಕಾಂಕ್ಷಿಗಳ ಒಗ್ಗಟ್ಟು ಬಿಜೆಪಿ ನಾಯಕರಿಗೆ ಸವಾಲಾಗಿ ಪರಿಣಮಿಸಲಿದೆಯೇ ಎಂಬುದು ಬರುವ ದಿನಗಳಲ್ಲಿ ಕಾದುನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *