ರಾಜ್ಯ

ಮಿಣಿ ಮಿಣಿ ಶಬ್ಧ ಇಟ್ಟುಕೊಂಡು ಬಿಜೆಪಿ‌ ಹೇಡಿಗಳ ಕೆಲಸ‌ ಮಾಡುತ್ತಿದೆ ಎಂದ ಹೆಚ್ಡಿಕೆ

ಬೆಂಗಳೂರು prajakiran.com : ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ ಗಳು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಟ್ವೀಟ್ ವಾರ್ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹೆಚ್ಡಿಕೆ ಅವರು, ಬಿಜೆಪಿ ವಿರುದ್ದ ಆಪಾದನೆಗಳ ಸುರಿಮಳೆಗೈದು ತಿರುಗೇಟು ನೀಡಿದ್ದಾರೆ.

ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ‌ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ‌ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ‌ ಎಂದು ಕುಟುಕಿದ್ದಾರೆ.

ನಾನು ಹಿಂದೆಯೇ ಹೇಳಿದಂತೆ, ಪಾಕಿಸ್ತಾನ, ನಾಜಿ ಜೀನ್ ಹೊಂದಿರುವ ಬಿಜೆಪಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾದ ನನ್ನನ್ನು ಹಣಿಯಲು ಪ್ರಯತ್ನಿಸುತ್ತಿದೆ ಎಂದು ಗುಡುಗಿದ್ದಾರೆ.

ಅವರಿಗೆ ನಮ್ಮ ಎದುರಲ್ಲಿ‌ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯಲು ಬಿಜೆಪಿ ನಿಂತಿದೆ ಎಂದು ಆಪಾದಿಸಿದ್ದಾರೆ.

ನಾನು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ‌. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಹೊರತು ಯಾವುದೇ ದುರುದ್ದೇಶವಿರಲಿಲ್ಲ. ಆದಿತ್ಯ ‘ರಾವ್’ ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ‌ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ ಎಂದು ದೂರಿದ್ದಾರೆ.

ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿ ಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ. ಎಷ್ಟೇ ಆಗಲಿ ಬಿಜೆಪಿಗರ ಜೀನ್ ಪಾಕಿಸ್ತಾನದ್ದಲ್ಲವೇ. ಅದಕ್ಕೇ ಅವರಿಗೆ ಕನ್ನಡದ ಪದಗಳು ತಾತ್ಸಾರ ಎಂದು ಟೀಕಿಸಿದ್ದಾರೆ.

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಬಳಿಸಿದ್ದ ಮಿಣಿ ಮಿಣಿ ಪೌಡರ್ ಶಬ್ದವನ್ನು ಬಿಜೆಪಿ ಟ್ರೋಲ್ ಮಾಡಿ ಅವರಿಗೆ ಅಪಹಾಸ್ಯ ಮಾಡಿದ್ದ ಬೆನ್ನಲ್ಲೇ ಬಿಜೆಪಿ ವಿರುದ್ದ ಹರಿಹಾಯುವ ಕೆಲಸ ಮಾಡಿದ್ದಾರೆ.

ಇದು ಇದೀಗ ಬಿಜೆಪಿ-ಜೆಡಿಎಸ್ ನಾಯಕರ ನಡುವೆ ವಾಕ್ಸಮರ, ಟ್ವೀಟ್ ವಾರ್, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ವೇದಿಕೆಯಾಗಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *