ರಾಜ್ಯ

ಕಲ್ಯಾಣ ಕರ್ನಾಟಕದ ರೂವಾರಿ ವೈಜನಾಥ ಪಾಟೀಲ್ ಇನ್ನು ನೆನಪು ಮಾತ್ರ

ಕಲಬುರಗಿ PRAJAKIRAN.COM : ಕಲ್ಯಾಣ ಕರ್ನಾಟಕಕ್ಕಾಗಿ ಹಲವು ವರ್ಷಗಳ ಕಾಲ ನಿರಂತರವಾಗಿ ಹೋರಾಟ ನಡೆಸಿ, ಕೊನೆಗೂ ವಿಶೇಷ ಸ್ಥಾನ ಮಾನ ತಂದುಕೊಟ್ಟಿದ್ದ ಮಾಜಿ ಸಚಿವ ವೈಜನಾಥ ಪಾಟೀಲ್ (82 )ಅವರು ಶನಿವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ೬ ಗಂಟೆ ಸುಮಾರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ತಮ್ಮ ಕೊನೆ ಉಸಿರು ಎಳೆದಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ವೈಜನಾಥ ಪಾಟೀಲ ಅವರು ದಿ. ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ 1984ರಲ್ಲಿ ತೋಟಗಾರಿಕೆ ಹಾಗೂ ಎಚ್. ಡಿ. ದೇವೇಗೌಡರ ಸಂಪುಟದಲ್ಲಿ 1994ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ರಾಜ್ಯದ ಗಮನ ಸೆಳೆದಿದ್ದರು.

ಹೈದರಾಬಾದ್ ಕರ್ನಾಟಕಕ್ಕಾಗಿ ಅವರು ನಡೆಸಿದ ಹತ್ತು ಹಲವು ಹೋರಾಟಗಳು ರಾಷ್ಟ್ರದ ಗಮನ ಸೆಳೇದಿದ್ದವು. ತೆಲಂಗಾಣ ಮಾದರಿಯ ಹೋರಾಟ ನಡೆಸಲು ಆಗಿನ ಕಾಲದಲ್ಲಿಯೇ ಅವರು ಸಜ್ಜಾಗಿದ್ದರು.

ಲಾಲ್ ಕೃಷ್ಣ ಅಡ್ವಾಣಿ ಅವರು ದೇಶದ ಉಪಪ್ರಧಾನಿಯಾಗಿದ್ದಾಗ ಸೈನಿಂಗ್ ಇಂಡಿಯಾ ರ್ಯಾಲಿಗೆ ಬೀದರ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿ ಬಂಧನಕ್ಕೊಳಗಾಗಿದ್ದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಗೆ ವೈಜನಾಥ ಪಾಟೀಲ್ ಅವರು ಹತ್ತು ಹಲವು ಕನಸುಗಳನ್ನು ಕಂಡಿದ್ದರು. ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 ಜೆ ವಿಧಿ ಜಾರಿಗೆ ಆಗ್ರಹಿಸಿ ಎರಡು ದಶಕಗಳ ಕಾಲ ಹೋರಾಟ ರೂಪಿಸಿ, ಆರು ಜಿಲ್ಲೆಗಳನ್ನು ಸಂಚರಿಸಿ, ಬೀದಿಗಳಿದು ಹೋರಾಟ ನಡೆಸಿದ್ದರು.

ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಹಾಗೂ ಈ ಭಾಗದ ಅಭಿವೃದ್ದಿ ಯೋಜನೆಗಳಿಗೆ ರಾಜ್ಯ ಸರಕಾರದ ಗಮನ ಸೆಳೆಯುತ್ತಿದ್ದ ವೈಜನಾಥ ಪಾಟೀಲ್ ಅವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು.

ಪ್ರತ್ಯೇಕ ರಾಜ್ಯ ಹೋರಾಟ ನಡೆಸಿ, ಆಳುವ ಸರಕಾರಗಳಿಗೆ ನಿದ್ದೆಗೆಡಿಸಿದ್ದರು. ತಮ್ಮ ಪ್ರಖರ ಹೋರಾಟಗಳಿಂದಲೇ ಸಾವಿರಾರು ಯುವಕರಿಗೆ ಮಾದರಿಯಾಗಿದ್ದ ವೈಜನಾಥ ಪಾಟೀಲ್ ಅವರನ್ನು ಕಳೆದುಕೊಂಡ ಕಲ್ಯಾಣ ಕರ್ನಾಟಕ ಅಕ್ಷರಶಃ ಇಂದು ಬಡವಾಗಿದೆ.

ಚಿಂಚೋಳಿ ವಿಧಾನ ಸಭಾ ಕ್ಷೇತ್ರದಿಂದ ಸತತವಾಗಿ ಶಾಸಕರಾಗಿದ್ದ ಅವರು ಜನತಾ ಪರಿವಾರದ ಹಿರಿಯ ಕೊಂಡಿ ಆಗಿದ್ದರು. ತಮ್ಮ ಪುತ್ರನಿಗಾಗಿ ಮಾತೃ ಪಕ್ಷ ತೊರೆದು ಕೊನೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.

ಡಾ. ವಿಕ್ರಮ್ ಪಾಟೀಲ್ ಅವರು ಯಡಿಯೂರಪ್ಪ ಸರಕಾರದಲ್ಲಿ ಎಂಎಸ್ಐಎಲ್ ಅಧ್ಯಕ್ಷರಾಗಿದ್ದರು. ಇನ್ನೊಬ್ಬ ಪುತ್ರ ಗೌತಮ ಪಾಟೀಲ್ ಪ್ರಸ್ತುತ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಅವರು ಮೂವರು ಪುತ್ರರು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Please follow and like us:

Leave a Reply

Your email address will not be published. Required fields are marked *