ರಾಜ್ಯ

ಸುಳ್ಳು ಸುದ್ಧಿ ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್, ಬಿ ಟಿವಿ, ಟಿವಿ 5, ದಿಗ್ವಿಜಯ ಚಾನಲ್ ಗಳಿಗೆ 73 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು Prajakiran.com : ಇತ್ತೀಚೆಗೆ ನ್ಯಾಯಾಧೀಶರ ಮನೆಯಲ್ಲಿ ಒಂಬತ್ತು ಕೋಟಿ ಅಕ್ರಮ ಹಣ ಪತ್ತೆ ಎಂದು ಸುಳ್ಳು ಸುದ್ಧಿ ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್, ಬಿ ಟಿವಿ, ಟಿವಿ 5, ದಿಗ್ವಿಜಯ ಚಾನಲ್ ಗಳಿಗೆ 73 ಲಕ್ಷ ದಂಡ ವಿಧಿಸಿ ಹೈಕೋರ್ಟ್ ಮಹತ್ತರವಾದ ಆದೇಶ ಹೊರಡಿಸುವ ಮ‌ೂಲಕ ಬಡಾಯಿ ಕೊಚ್ಚಿಕೊಂಡು ಬೀಗುವ ಪತ್ರಿಕೆ ಹಾಗೂ ಟಿವಿಗಳಿಗೆ ಬಿಗ್ ಶಾಕ್ ನೀಡಿದೆ.

ವಿಶ್ವಾಸಾರ್ಹ ಖ್ಯಾತಿಯ ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್ ಮತ್ತು ಕನ್ನಡದ ಪ್ರತಿಷ್ಠಿತ ಸುದ್ದಿ ವಾಹಿನಿಗಳಾದ ಬಿ ಟಿವಿ, ಟಿವಿ 5 ಹಾಗೂ ದಿಗ್ವಿಜಯ ಚಾನಲ್ ಗಳು ಒಟ್ಟು ರೂ. 73 ಲಕ್ಷ ದಂಡದ ಜತೆಗೆ, ಸುಳ್ಳು ವರದಿಯನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಪ್ರಸಾರ ಮಾಡಿದ್ದಕ್ಕಾಗಿ ಬೇಷರತ್ತಾಗಿ ಕ್ಷಮೆಯಾಚನೆಯನ್ನು ಮಾಡಬೇಕೆಂದು ಕೋರ್ಟ್ ಸೂಚಿಸಿದೆ.

ನ್ಯಾಯಾಧೀಶರೊಬ್ಬರ ಮನೆಯ ಮೇಲೆ ದಾಳಿ ಮಾಡಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಸುದ್ದಿಯನ್ನು ಈ ಮಾಧ್ಯಮಗಳು ಪ್ರಕಟಿಸಿದ್ದವು.

ಮಹತ್ವದ ವಿಷಯವೆಂದರೆ ಯಾವುದೇ ಮೂಲ ಮತ್ತು ಪರಿಶೀಲನೆ ಇಲ್ಲದೆ ಈ ಸುದ್ದಿಯನ್ನು ಪ್ರಕಟಿಸಿದ್ದಾಗಿ ಮಾಧ್ಯಮ ಸಂಸ್ಥೆಗಳು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿವೆ.

ಸುಳ್ಳು ಸುದ್ದಿ ಪ್ರಕಟಣೆಯಿಂದಾಗಿ ನ್ಯಾಯಾಂಗಕ್ಕೆ ಆಗಿರುವ ಹಾನಿಗೆ ನ್ಯಾಯಾಲಯದ ನಿರ್ದೇಶನದಂತೆ ದಂಡ ಕಟ್ಟಲು ಈ ಮಾಧ್ಯಮ ಸಂಸ್ಥೆಗಳು ಒಪ್ಪಿಕೊಂಡಿವೆ.

ಈ ಸುಳ್ಳು ವರದಿಯನ್ನು ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ದಿನಪತ್ರಿಕೆ ಬೇಷರತ್ತಾಗಿ ಕ್ಷಮೆಯಾಚಿಸುವುದರ ಜೊತೆಗೆ 30 ಲಕ್ಷವನ್ನು ದಂಡವಾಗಿ ಪಾವತಿಸಲು ಒಪ್ಪಿಕೊಂಡಿದೆ.

ಕನ್ನಡದ ನ್ಯೂಸ್ ಚಾನಲ್ ಗಳಾದ BTV ಚಾನೆಲ್‌ 20 ಲಕ್ಷ, TV5 8 ಲಕ್ಷ ಮತ್ತು ದಿಗ್ವಿಜಯ ಟಿವಿಗೆ 15 ಲಕ್ಷ ದಂಡ ಪಾವತಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ಟಿ ಆರ್ ಪಿ ಮತ್ತು ಪ್ರಸರಣ ಹೆಚ್ಚಿಸಿಕೊಳ್ಳುವುದಕ್ಕಾಗಿ ವರದಿಯ ಪೂರ್ವಾಪರಗಳನ್ನು ಪರಿಶೀಲಿಸದೆ ಸುದ್ದಿಯನ್ನು ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದು ಮಾಧ್ಯಮ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹೈಕೋರ್ಟ್ ಮಹತ್ವದ ತೀರ್ಪು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಗೆ ಒಂದು ನೀತಿ ಪಾಠವಾಗಬೇಕಿದೆ ಎಂದು ಕಿವಿ ಮಾತು ಹೇಳಿದೆ.

ಹೈಕೋರ್ಟ್ ಈ ಕುರಿತು ಮಾಧ್ಯಮಗಳ ವಿರುದ್ದ ಛಾಟಿ ಬಿಸುವ ಜೊತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಪ್ರಕರಣ ಕನ್ನಡ ಮಾಧ್ಯಮ ಲೋಕದಲ್ಲಿ ಮಿಂಚಿನ ಸಂಚಲನವನ್ನು ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಅಲ್ಲದೆ, ಮನಬಂದಂತೆ ಬೊಗಳೆ ಬಿಡುವ ಮುನ್ನ ಒಂದು ಸುದ್ದಿ ಪ್ರಕಟಿಸುವುದು ಕೂಡ ಹತ್ತು ಬಾರಿ ಯೋಚಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ಈಗಲಾದರೂ ಕನ್ನಡದ ಸುದ್ದಿ ಮಾಧ್ಯಮಗಳು ಹಾಗೂ ಕನ್ನಡ ಪತ್ರಿಕಾ ಪ್ರಪಂಚ ಎಚ್ಚರಿಕೆಯಿಂದ ನಡೆ ಇಡುತ್ತಾ ಎಂಬುದು ಕಾದು ನೋಡಬೇಕು.

Please follow and like us:

Leave a Reply

Your email address will not be published. Required fields are marked *