ಧಾರವಾಡ PRAJAKIRAN.COM : ಇಂದಿನ ಸಮಾಜ ಹಲವಾರು ದೃಷ್ಟಿಕೋನಗಳಿಂದ ಕಲುಷಿತಗೊಂಡಿದ್ದು, ಮಕ್ಕಳ ಮನಸ್ಸು ಹಾಳಾಗದಂತೆ ನೋಡಿಕೊಂಡು ಆಧ್ಯಾತ್ಮದ ಮೂಲಕ ಅವರಲ್ಲಿ ನೈತಿಕ ಮೌಲ್ಯಗಳನ್ನು ತುಂಬಬೇಕಾಗಿದೆ ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಸ್ವಾಮೀಜಿ ಪಾಲಕರಿಗೆ ಕಿವಿಮಾತು ಹೇಳಿದರು.
ಅವರು ಕ್ಲಾಸಿಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಕ್ಲಾಸಿಕ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಆದರ್ಶ ಸಮಾಜ ಕಟ್ಟಲು ಪ್ರೇರಣೆ ನೀಡಬೇಕೆಂದು ಹೇಳಿದರು.
ಮನೋತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ಅಂಕಗಳಿಗಾಗಿ ಮಕ್ಕಳ ಮೇಲೆ ಒತ್ತಡ ಹಾಕದೆ ಅವರ ಕನಸುಗಳಿಗೆ ನೀರೆರೆದು ಪೋಷಿಸಬೇಕು. ಮಕ್ಕಳ ಸಮಸ್ಯೆಗಳಿಗೆ ಪ್ರೀತಿಯಿಂದ ಸ್ಪಂದಿಸಿ ಎಂದು ಹೇಳಿದರು.
ಡಿಮ್ಯಾನ್ಸ್ ಸಹಾಯಕ ಪ್ರಾಧ್ಯಾಪಕ ಡಾ. ಬಿ. ಜಿ. ಅನಂತ ರಾಮು ಮಾತನಾಡಿ, ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಅಡಿಪಾಯ ಹಾಕಿ ಸವಾಲುಗಳನ್ನು ಎದುರಿಸಲು ಸನ್ನದ್ಧಗೊಳಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಲಕ್ಷ್ಮಣ ಎಸ್. ಉಪ್ಪಾರ ಮಾತನಾಡಿ, ಯೋಗ, ಧ್ಯಾನದ ಮೂಲಕ ಮಕ್ಕಳಲ್ಲಿ ಏಕಾಗ್ರತೆ ಮೂಡಿಸಿ ಅವರನ್ನು ಸ್ನೇಹಿತರಂತೆ ಕಂಡು ಪ್ರೀತಿಯಿಂದ ಮಾರ್ಗದರ್ಶನ ನೀಡಿದರೆ ಶ್ರೇಷ್ಠ ಸಾಧನೆ ಮಾಡಬಲ್ಲರು ಎಂದರು.
ಶೈಕ್ಷಣಿಕ ಮಾರ್ಗದರ್ಶಕ ಡಾ. ಎಂ. ವಾಯ್. ಸಾವಂತ ಮಾತನಾಡಿ, ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕೆಂದು ಹೇಳಿದರು.
ಸ್ಪರ್ಧಾ ಸ್ಫೂರ್ತಿ ಸಂಪಾದಕ ಐ. ಜಿ. ಚೌಗಲಾ ಮಾತನಾಡಿ, ಪಾಲಕರು ಮಕ್ಕಳ ಕುರಿತು ನಕಾರಾತ್ಮಕ ಧೋರಣೆ ತಾಳಬಾರದು. ಅವರಲ್ಲಿ ಆತ್ಮವಿಶ್ವಾಸ ಹುಟ್ಟಿಸಿದರೆ ಪಾಲಕರ ನಿರೀಕ್ಷೆಗಿಂತಲೂ ಹೆಚ್ಚಿನ ಸಾಧನೆ ಮಕ್ಕಳಿಂದ ಸಾಧ್ಯವಿದೆ ಎಂದರು.
ಪ್ರಾಚಾರ್ಯರಾದ ಡಾ. ಐ. ಎಸ್. ಮಳೇಕರ ಹಾಗೂ ಎಚ್. ಎಂ. ಉಡಕೇರಿ ವೇದಿಕೆಯಲ್ಲಿದ್ದರು. ಬಸವರಾಜ ಹೂಗಾರ ಪ್ರಾರ್ಥಿಸಿದರು.
ಸಂಯೋಜಕಿ ಅಶ್ವಿನಿ ಕೊಟ್ಲಿ ಸ್ವಾಗತಿಸಿದರು. ಸಾಧನಾ ಪವಾರ ಪರಿಚಯಿಸಿದರು. ರುದ್ರಗೌಡ ಉಪ್ಪಿನ ನಿರೂಪಿಸಿದರು. ಬಸವರಾಜ ಕುಪ್ಪಸಗೌಡ್ರ ವಂದಿಸಿದರು. ಪಾಲಕರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.