ಜಮ್ಮು ಕಾಶ್ಮೀರ prajakiran.com : ಯೋಧನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ.
ಶ್ರೀನಗರದ ಅನಂತನಾಗ ಜಿಲ್ಲೆಯ ಸಿಆರ್ ಪಿ ಎಫ್ ಯೋಧ ಈಶ್ವರ್ ಯಲ್ಲಪ್ಪ ಸುರಣಗಿ ಅವರು ಸಾವಿಗೆ ಶರಣಾದ ಯೋಧರಾಗಿದ್ದಾರೆ.
ಅವರು ಗುರುವಾರ ಬೆಳಗಿನ ಜಾವ ಮರಣ ಹೊಂದಿದ್ದಾರೆ ಎಂಬ ಸುದ್ದಿ ಸೇನೆ ಸಿಬ್ಬಂದಿ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಸಾವಿನ ಸುದ್ದಿ ಗ್ರಾಮಸ್ಥರಿಗೆ ಮುಟ್ಟುತ್ತಿದ್ದಂತೆ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಈಶ್ವರ್ ಯಲ್ಲಪ್ಪ ಸುರಣಗಿ ಅವರು 1994 -95 ನೇ ಸಾಲಿನಲ್ಲಿ ಸಿಆರ್ ಪಿ ಎಫ್ ಯೋಧನಾಗಿ ಆಯ್ಕೆಯಾಗಿದ್ದರು.
ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಈಗ ಜಮ್ಮುವಿನ ಅನಂತನಾಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮಕ್ಕಳ ವಿದ್ಯಾಭ್ಯಾಸ ದೃಷ್ಟಿಯಿಂದ ಪ್ರಸ್ತುತ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಈಶ್ವರ ನಗರದಲ್ಲಿ ಹದಿನೈದು ವರ್ಷಗಳಿಂದ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದರು.
ಯೋಧ ಈಶ್ವರ್ ಅವರು ಇತ್ತೀಚಿಗೆ 2019ರ ಡಿಸೆಂಬರ್ ತಿಂಗಳಲ್ಲಿ ರಜೆಗಾಗಿ ಮನೆಗೆ ಬಂದು 2020 ಜನವರಿ 6 ರಂದು ತಮ್ಮ ಕರ್ತವ್ಯಕ್ಕೆ ಮರಳಿದ್ದರು.
ಅಲ್ಲದೆ, ಪ್ರತಿ ದಿನವು ಪತ್ನಿ-ಮಕ್ಕಳೊಂದಿಗೆ ದೂರವಾಣಿಯ ಮೂಲಕ ಮಾತನಾಡುತ್ತಿದ್ದರು. ಬುಧವಾರ ರಾತ್ರಿ 8ಗಂಟೆಗೆ ಸುಮಾರಿಗೆ ಪತ್ನಿಯೊಂದಿಗೆ ಮಾತನಾಡಿ ಮಕ್ಕಳ ವಿದ್ಯಾಭ್ಯಾಸ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದ್ದರು.
ನಾನು ಸೇವೆ ಸಲ್ಲಿಸುತ್ತಿರುವ ಪ್ರದೇಶದಲ್ಲಿ ಅತಿ ಹೆಚ್ಚು ವಿಪರೀತ ಚಳಿ ಇರುವುದರಿಂದ ಕಾಳಜಿ ವಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿಕೊಂಡಿದ್ದರು.
ನಂತರ ಗುರುವಾರ ಬೆಳಗಿನ ಜಾವ ಶ್ರೀನಗರದಿಂದ ಯೋಧನ ಪತ್ನಿ ಲಲಿತಾ ಅವರಿಗೆ ಹಿಂದಿ ಭಾಷೆಯಲ್ಲಿ ನಿಮ್ಮ ಗಂಡ ಈಶ್ವರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದರು.
ಇದರಿಂದ ಗಾಬರಿಗೊಂಡ ಪತ್ನಿ ತಮ್ಮ ಗಂಡನ ಯೋಧನ ಸ್ನೇಹಿತನಾದ ರಾಮನಗರದ ಅಣ್ಣಯ್ಯ ಅವರಿಗೆ ಫೋನ್ ಕರೆ ಮಾಡಿ ಘಟನೆ ವಿವರವನ್ನು ಕೇಳಿದಾಗ ಈಶ್ವರ್ ಅವರು ಸ್ವತಃ ತಾವೇ ತಮ್ಮ ಹಣೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಇದರಿಂದಾಗಿ ದಿಕ್ಕು ತೋಚದಂತಾದ ಯೋಧನ ಪತ್ನಿಯನ್ನು ಗ್ರಾಮಸ್ಥರು ಸಂತೈಸುವ ದೃಶ್ಯ ಮನಕಲಕುವಂತಿತ್ತು. ಯೋಧನ ಹುಟ್ಟೂರಾದ ಬರದ್ವಾಡ ಗ್ರಾಮದಲ್ಲಿ ಸಾವಿನ ಸುದ್ದಿಯಿಂದಾಗಿ ನಿರವ ಮೌನ ಆವರಿಸಿದೆ.
ಮಗನ ಸಾವಿನ ಸುದ್ದಿಯಿಂದಾಗಿ ಗರ ಬಡಿದಂತಾಗಿರುವ ತಂದೆ-ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಕುಂದಗೋಳ ತಹಸೀಲ್ದಾರ್ ಬಸವರಾಜ್ ಮೆಳವಣಿಕೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.