ಧಾರವಾಡ : ಧಾರವಾಡದ ನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣದಲ್ಲಿ ಈವರೆಗೆ ಐದು ಜನರನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ
ಕಿಮ್ಸಗೆ ದಾಖಲಾದವರನ್ನು ಮತ್ತೆ ಪೊಲೀಸ್ ವಶಕ್ಕೆ ಪಡೆಯುತ್ತೇವೆ
ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು.
ಅವರು ಸೋಮವಾರ ಘಟನಾ ಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಅವರು ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂದರು.
ನಾವು ಕ್ರಿಮಿನಲ್ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸುತ್ತೇವೆ. ಪ್ರತಿಯೊಂದನ್ನೂ ಪಾರದರ್ಶಕ ತನಿಖೆ ನಡೆಸುತ್ತೇವೆ ಎಂದರು.
ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥಾರಿದ್ದಾರೆ ಎಂದು ತಿಳಿದು ಮೃತ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ.
ಈ ಪ್ರಕರಣಕ್ಕೆ ಸಂಬಂಧಿಸಿ ಯಾರೇ ದೂರು ದಾಖಲಿಸಿದರೂ ಪಡೆಯುತ್ತೇವೆ ಎಂದು ನಾಗರಾಜ ವಿವರಿಸಿದರು.
ಕಟ್ಟಡ ಬಿದ್ದಾಗ ಧೂಳು ತುಂಬಿತ್ತು. ಜನರು ಸಾಕಷ್ಟು ನೆರೆದಿದ್ದರು. ಅವರನ್ನು ಸರಿಸಿ, ತಕ್ಷಣದಲ್ಲೆ ಸಾಧ್ಯವಾದಷ್ಟು ಜನರ ರಕ್ಷಣೆ ಪ್ರಾರಂಭಿಸಿದೆವು ಎಂದರು.
ಹುಬ್ಬಳ್ಳಿ-ಧಾರವಾಡ ಅಗ್ನಿಶಾಮಕ ದಳ ಸಿಬ್ಬಂದಿ ಕರೆಯಿಸಿದೆವು. ಜಿಲ್ಲಾಧಿಕಾರಿ ತಕ್ಷಣ ಅಗತ್ಯ ಯಂತ್ರಗಳನ್ನು ತರಿಸುವ ಕೆಲಸ ಮಾಡಿದರು. ಸ್ಥಳೀಯ ಜನರು ರಕ್ಷಣೆ ಕಾರ್ಯಕ್ಕೆ ಸಹಾಯ ಮಾಡಿದರು ಎಂದರು.
ಅದರಲ್ಲಿ ಏಳೆಂಟು ಜನ ಒಂದು ವಾರ ಕಾಲ ನಮ್ಮೊಂದಿಗೆ ಕೆಲಸ ಮಾಡಿದರು. ಬೆಂಗಳೂರಿಗೆ ಮಾಹಿತಿ ನೀಡಿ ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ಸಿಬ್ಬಂದಿ ಆಗಮಿಸಿ ಯೋಜನಾ ಬದ್ಧವಾಗಿ ರಕ್ಷಣಾ ಕಾರ್ಯ ಪ್ರಾರಂಭಿಸಿದರು ಎಂದರು.
ಎಲ್ಲ ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡಿ ಅನೇಕ ಜೀವ ಉಳಿಸಿದ್ದಾರೆ. ಸಹಕಾರ ಕೊಟ್ಟ ಎಲ್ಲರಿಗೂ ಕೃತಜ್ಞತೆ. ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಆರ್ ಸಿ ಅವರು ತನಿಖೆ ಪ್ರಾರಂಭಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು.