ರಾಜ್ಯ

ಬಿಜೆಪಿ ಸಂಪರ್ಕ ಮಾಡಿಲ್ಲ ಎಂದ ಆನಂದಸಿಂಗ್

ಬೆಂಗಳೂರು : ರಾಜ್ಯದ ಸಮ್ಮೀಶ್ರ ಸರಕಾರಕ್ಕೆ ಎಳ್ಳುನೀರು ಬಿಡಲು ಸಜ್ಜಾಗಿದ್ದ ಹೊಸಪೇಟೆಯ ವಿಜಯನಗರ ಶಾಸಕ ಆನಂದ್ ಸಿಂಗ್ ಮಂಗಳವಾರ ಮತ್ತೇ ಕಾಂಗ್ರೆಸ್ ನಾಯಕರ ಎದುರು ಹಾಜರಾಗಿ ನಾನು ಎಲ್ಲಿಯೂ ಹೋಗಿಲ್ಲ. ಬಿಜೆಪಿ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅವರು ಮಂಗಳವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ತಂಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಭೇಟಿ ಮಾಡಿ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಹಲವು ದಿನಗಳಿಂದ ಆಪರೇಶನ್ ಕಮಲದಲ್ಲಿ ನನ್ನ ಹೆಸರು ತಳಕುಹಾಕಿಕೊಂಡಿದೆ. ನಾನೂ ಎಲ್ಲಿಗೂ ಹೋಗಿಲ್ಲ. ಇಲ್ಲೇ ಇದ್ದೇನೆ. ಬಳ್ಳಾರಿ ಶಾಸಕ ನಾಗೇಂದ್ರ ನನ್ನನ್ನೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಜಲಸಂಪನ್ಮೂಲಸಚಿವ ಡಿ.ಕೆ. ಶಿವಕುಮಾರ ಅವರ ಮನೆಯಲ್ಲಿ ಕಾಣಿಸಿಕೊಂಡ ಆನಂದಸಿಂಗ್ ಅವರ ಮನವೊಲಿಸಿದ ಶಿವಕುಮಾರ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಬಳಿ ಕರೆದುಕೊಂಡು ಹೋಗಿ ಸಮಾಧಾನ ಪಡಿಸಿದರು.

ಬಿಜೆಪಿಯ ಆಪರೇಶನ್ ಕಮಲದಿಂದ ಕಂಗಾಲಾಗಿರುವ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಅತೃಪ್ತ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಹೆಣಗಾಡುತ್ತಿರುವ ಬೆನ್ನ ಹಿಂದೆಯೇ ಹೊಸಪೇಟೆಯ ವಿಜಯನಗರ ಶಾಸಕ ಆನಂದ ಸಿಂಗ್ ಅವರನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ತಣ್ಣಗಾಗಿರಿಸುವುದು ತೀವ್ರ ಕುತೂಹಲ ಕೆರಳಿಸಿದೆ.

ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರ ಬಳಿ ಕರೆದುಕೊಂಡು ಹೋಗಿ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಅಲ್ಲದೆ, ಆಪರೇಶನ್ ಕಮಲದ ಕುರಿತು ಇಂಚು ಇಂಚು ಮಾಹಿತಿ ಪಡೆದಿದ್ದಾರೆ.

ಜಮೀರ್ ಅಹ್ಮದ್ ಖಾನ್ ಕೂಡ ನಿನ್ನೆ ಆನಂದಸಿಂಗ್ ಜೊತೆಗೆ ಮಾತನಾಡಿ, ಮನವೊಲಿಸಿದ್ದರು. ಹೀಗಾಗಿ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಆನಂದ ಸಿಂಗ್ ಕಾಂಗ್ರೆಸ್ ನಲ್ಲಿಯೇ ಉಳಿತ್ತಾರೆಯೇ ಅಥವಾ ಬಿಜೆಪಿಯ ಆಪರೇಶನ್ ಕಮಲಕ್ಕೆ ಬಲಿಯಾಗುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *