ಧಾರವಾಡ prajakiran.com : ಕರೊನಾ ನಿಯಂತ್ರಣಕ್ಕೆ ಕೆಮ್ಮು, ನೆಗಡಿ, ತೀವ್ರ ಜ್ವರ (ಐಎಲ್ಐ) ಮತ್ತು ತೀವ್ರ ಉಸಿರಾಟದ ತೊಂದರೆ (ಎಸ್ಎಆರ್ಐ) ಲಕ್ಷಣಗಳಿರುವ ಎಲ್ಲರನ್ನೂ ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸುವುದು ಅವಶ್ಯವಾಗಿದೆ.
ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ದಾಖಲಾಗುವ ಈ ಪ್ರಕರಣಗಳನ್ನು ಶೇ.೧೦೦ ರಷ್ಟು ತ್ವರಿತವಾಗಿ ತಪಾಸಣೆಗೊಳಪಡಿಸಬೇಕು.
ಅದಕ್ಕೆ ಅಗತ್ಯವಿರುವ ವಾಹನ ಮತ್ತು ಇತರ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರೊನಾ ಹರಡುವಿಕೆ ನಿಯಂತ್ರಿಸಲು ತ್ವರಿತ ತಪಾಸಣೆ ಅತೀ ಮುಖ್ಯವಾಗಿದೆ. ಜಿಲ್ಲೆಯ ಸರ್ಕಾರಿ ಮತ್ತು ಕೆಪಿಎಂಇ ನೊಂದಾಯಿತ ಆಸ್ಪತ್ರೆಗಳಲ್ಲಿ ಪ್ರತಿದಿನ ವರದಿಯಾಗುವ ಐಎಲ್ಐ ಹಾಗೂ ಎಸ್ಎಆರ್ಐ ಪ್ರಕರಣಗಳನ್ನು ಪೋರ್ಟಲ್ನಲ್ಲಿ ದಾಖಲಾದ ಕೂಡಲೇ ಆ ವ್ಯಕ್ತಿಗಳನ್ನು ಸಂಪರ್ಕಿಸಿ ಸಮೀಪದ ಮೂಗು ಮತ್ತು ಗಂಟಲು ದ್ರವ ಸಂಗ್ರಹಣಾ ಕೇಂದ್ರದಲ್ಲಿ ಪ್ರಯೋಗಾಲಯದ ಮಾದರಿಯನ್ನು ಪಡೆಯಬೇಕು ಎಂದರು.
ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಪಟ್ಟಿಯನ್ನು ಪ್ರತಿದಿನ ಪೊಲೀಸ್ರಿಗೆ ಕಳುಹಿಸಲಾಗುತ್ತಿದೆ. ಅವರ ಮೇಲೆ ನಿಗಾ ವಹಿಸುವ ಪ್ರಕ್ರಿಯೆ ಚುರುಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಬಿ.ಸಿ. ಸತೀಶ್ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನಿರಾಕರಿಸಬಾರದು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಅರ್ಹ ವ್ಯಕ್ತಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಕಿಮ್ಸ್ನ ಡಾ: ಲಕ್ಷ್ಮೀ ಕಾಂತ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಎಸ್.ಕೆ. ಮಾನಕರ, ಡಾ: ಸುಜಾತಾ ಹಸವೀಮಠ, ಡಾ: ಶಶಿ ಪಾಟೀಲ, ಡಾ: ಎಸ್.ಎಂ. ಹೊನಕೇರಿ, ಡಾ: ತನುಜಾ, ಡಾ: ಶಶಿಕಲಾ ನಿಂಬಣ್ಣವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.