ರಾಜ್ಯ

ಆನೆ ಹಾವಳಿಯಿಂದ ಭತ್ತದ ಗದ್ದೆ ಹಾನಿ : ಪುಟ್ಟ ಬಾಲಕಿಯಿಂದ ಸಿಎಂ ಕುಮಾರಸ್ವಾಮಿಗೆ ಮನವಿ

ಹಾಸನ : ಕಳೆದ ಹದಿನೈದು ದಿನಗಳಿಂದ ಒಂಟಿ ಸಲಗದ ಹಾವಳಿಯಿಂದ ನೂರಾರು ಎಕರೆ ಭತ್ತದ ಗದ್ದೆ ಹಾಳಾದ ಹಿನ್ನಲೆಯಲ್ಲಿ ಪುಟ್ಟ ಬಾಲಕಿಯೊಬ್ಬಳು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹಾಳಾಗಿರುವ ಭತ್ತದ ಗ‍ದ್ದೆಯಲ್ಲಿಯೇ ರೈತ ಶಶಿಧರ್ ಎಂಬುವರ ಮಗಳು ವಿಸ್ಮಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೆ, ನಮ್ಮನ್ನು ಆನೆ ದಾಳಿಯಿಂದ ರಕ್ಷಿಸಿ, ಭತ್ತದ ಗದ್ದೆಯಂತೂ ಹಾಳಾಗಿದೆ, ನಮ್ಮ ಜೀವವನ್ನಾದರೂ ಉಳಿಸಿ ಎಂದು ಮನವಿ ಮಾಡಿದ್ದಾಳೆ,

ಈ ಬಗ್ಗೆ ಮಾತನಾಡಿರುವ ರೈತ ಶಶಿಧರ್, ನಮ್ಮ ಬೆಳೆ ಹಾಳಾಗಿದೆ ಅಷ್ಟೇ ಅಲ್ಲ, ಜೀವ ಉಳಿಸಿಕೊಳ್ಳುವುದು ಕೂಡ ಕಷ್ಟಕರವಾಗಿದೆ. ಆನೆಗಳು ಹಗಲು ರಾತ್ರಿ ಯನ್ನದೆ ಗ್ರಾಮಕ್ಕೆ ಬಂದು ಗಲಾಟೆ ಮಾಡುತ್ತಿವೆ. ಅರಣ್ಯ ಇಲಾಖೆ ಹೊರ ಗುತ್ತಿಗೆ ಮೇಲೆ ಕೆಲ ಯುವಕರನ್ನು ತೆಗೆದುಕೊಂಡಿದ್ದಾರೆ. ಅವರಿಗೆ ತರಬೇತಿ ಇಲ್ಲ ಎಂದು ಆರೋಪಿಸಿದ್ದಾರೆ.

ಅವರು ಆನೆ ಓಡಿಸುವುದಕ್ಕಿಂತ ಮುಂಚೆಯೇ ಹೆದರಿದ್ದಾರೆ. ನಮಗಿಂತ ಅವರೇ ಭಯಭೀತರಾಗಿದ್ದಾರೆ. ನಾವೇ ಗ್ರಾಮಸ್ಥರು ಒಂಟಿಸಲಗಗಳನ್ನು ಓಡಿಸಿ ನಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದೆವೆ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಹೈನುಗಾರಿಕೆ ಮಾಡುವ ರೈತರು ನಡೆದುಕೊಂಡು ರಸ್ತೆ ಹೋಗಲು ಆಗುತ್ತಿಲ್ಲ. ಒಂಟಿ ಸಲಗ ಗ್ರಾಮಕ್ಕೆ ನುಗ್ಗುತ್ತದೆ ಎಂಬ ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ವಿವರಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ, ಆಲೂರ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಆನೆಗಳ ಹಿಂಡು ಸಂಚರಿಸುತ್ತಿರುವೆ. ಈವರೆಗೆ ಎಷ್ಟೋ ಪ್ರಾಣಗಳು ಕಳೆದುಕೊಂಡ ರೈತರು ಸರಕಾರದ ವಿರುದ್ದ ಹಿಡಿ ಶಾಪ ಹಾಕುತ್ತಲೇ ಇದ್ದಾರೆ.

ಆದರೆ ಯಾರೊಬ್ಬ ಜನಪ್ರತಿನಿಧಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಆನೆಗಳ ಮಾನವ ಸಂಘರ್ಷ ನಡೆಯುತ್ತಲೇ ಇದೆ. ಇದೀಗ ಪುಟ್ಟ ಬಾಲಕಿಯ ಮನವಿಗೆ ಸಿಎಂ ಕುಮಾರಸ್ವಾಮಿ ಸ್ಪಂದಿಸುತ್ತಾರಾ, ತವರು ಜಿಲ್ಲೆಯ ಆನೆಗಳ ಹಾವಳಿಗೆ ಬ್ರೇಕ್ ಹಾಕುತ್ತಾರಾ ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *