ಲಕ್ನೋ (ಉತ್ತರಪ್ರದೇಶ) prajakiran.com : ಕಾನ್ಪುರದ 8 ಪೊಲೀಸರ ಸಾವಿಗೆ ಕಾರಣವಾಗಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಕೊನೆಗೂ ಬಂಧಿಸುವಲ್ಲಿ ಮಧ್ಯಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದ ಇತನನ್ನು ಸೆರೆ ಹಿಡಿಯಲು ಪೊಲೀಸರು ಬೆನ್ನು ಹತ್ತಿದ್ದರು.
ಆದರೆ ಅದು ಸಾಧ್ಯವಾಗಿರಲಿಲ್ಲ. ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳ ದೇವಸ್ಥಾನಕ್ಕೆ ಆಗಮಿಸಿದ್ದ ಆತ ದೇವಿಯ ದರ್ಶನ ಮಾಡಿದ ನಂತರ ತಾನು ವಿಕಾಸ್ ದುಬೆ ಎಂದು ಅರಚಿದ್ದಾನೆ.
ಇದರಿಂದ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದು ಆನಂತರ ಯುಪಿ ಪೊಲೀಸರಿಗೆ ಮಾಹಿತಿ ರವಾನಿಸಿದರು. ಆ ಬಳಿಕ ಸ್ಥಳಕ್ಕೆ ಆಗಮಿಸಿದ ಯುಪಿ ಪೊಲೀಸರು ಆತನನ್ನು ಬಂಧಿಸಿ ಉತ್ತರ ಪ್ರದೇಶಕ್ಕೆ ಕರೆದೊಯ್ದರು.
ಬುಧವಾರವಷ್ಟೇ ಆತನ ಆಪ್ತ ಅಮನ್ ದುಬೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಈ ವೇಳೆ ನಡೆದ ಎನ್ ಕೌಂಟರ್ ನಲ್ಲಿ ಪೊಲೀಸರ ಮತ್ತು ಅವರ ನಡುವೆ ಗುಂಡಿನ ಚಕಮಕಿ ನಡೆದು ಇಬ್ಬರು ಪೊಲೀಸರು ಗಾಯಗೊಂಡಿದ್ದರು.
ಇದೇ ವೇಳೆ ಪೊಲೀಸ್ ದಾಳಿಯ ಮಾಹಿತಿ ನೀಡಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ಚೌಬೆಪುರ ಠಾಣಾಧಿಕಾರಿ ವಿನಯ್ ತಿವಾರಿ ಹಾಗೂ ಬಿಕ್ರೂ ಗ್ರಾಮದ ಬೀಟ್ ಪೊಲೀಸ್ ಕೆ.ಕೆ. ಶರ್ಮಾ ಬಂಧಿತ ಪೊಲೀಸರು.
ಇವರಿಬ್ಬರು 8 ಪೊಲೀಸರು ಬಲಿಯಾದ ಎನ್ ಕೌಂಟರ್ ಸ್ಥಳದಿಂದ ಕಾಲು ಕಿತ್ತಿದ್ದ ಆರೋಪ ಎದುರಿಸುತ್ತಿದ್ದರು. ಅವನ ಇಬ್ಬರು ಆಪ್ತರು ಪೊಲೀಸರ ಗುಂಡಿಗೆ ಬಲಿಯಾಗಿದ್ದರೆ ಆರು ಜನ ಅಂದರ್ ಆಗಿದ್ದಾರೆ.
ಇತನನ್ನು ಹಿಡಿಯಲು ತೆರಳಿದಾಗ ಒಬ್ಬ ಡಿವೈಎಸ್ಪಿ, ಇಬ್ಬರು ಸಬ್ ಇನ್ಸಪೆಕ್ಟರ್ ಸೇರಿ 8 ಜನ ಸಾವನ್ನಪ್ಪಿದ್ದರು. ಇದರಿಂದಾಗಿ ಇಡೀ ದೇಶದ ಪೊಲೀಸರು ಉತ್ತರ ಪ್ರದೇಶದತ್ತ ಮುಖ ಮಾಡಿದ್ದರು.
ಶೋಲೆ ಸಿನಿಮಾದ ಗಬ್ಬರ್ ಸಿಂಗ್ ಮಾದರಿಯಲ್ಲಿ ಈತ ಜಂಗಲ್ ನ್ಯಾಯ ಮಾಡುತ್ತಿದ್ದ. ಗ್ರಾಮಸ್ಥರು ಈತ ಕಾಟ, ಕಿರುಕುಳದಿಂದ ಬೇಸತ್ತಿದ್ದರು. ಈಗ ಒಂದೊಂದಾಗಿ ಆತನ ಕರಾಳ ಮುಖಗಳು ಅನಾವರಣಗೊಳ್ಳುತ್ತಿವೆ.
ಇತನ ವಿರುದ್ದಅಂದಾಜು 60ಕ್ಕೂ ಹೆಚ್ಚು ಪ್ರಕರಣಗಳಿದ್ದು, 2001ರಲ್ಲಿಯೇ ಉತ್ತರ ಪ್ರದೇಶದ ಮಾಜಿ ಸಚಿವ ಸಂತೋಷ ಶುಕ್ಲಾ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪವಿದೆ.
ಇತನ ಪತ್ನಿ ರಿಚಾ ದುಬೆ ಉತ್ತರಪ್ರದೇಶದ ದಿಮಾಊ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.
ಪ್ರಬಲ ರಾಜಕೀಯ ಪಕ್ಷದ ನಾಯಕರೊಂದಿಗೆ ಇತ ಗುರುತಿಸಿಕೊಂಡಿದ್ದ ಆರೋಪ ಇದೀಗ ಚರ್ಚೆಗೆ ಪರ-ವಿರೋಧಕ್ಕೆ ಕಾರಣವಾಗಿದೆ.