ರಾಜ್ಯ

ಶಾಸಕನಿಗೆ ಹನಿಟ್ರಾಫ್ ಮಾಡಿ ಕೋಟ್ಯಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದ 10 ಮಂದಿ ಅರೆಸ್ಟ್

ಬೆಂಗಳೂರು PRAJAKIRAN.COM : ಉತ್ತರ ಕರ್ನಾಟಕ ಭಾಗದ ಪ್ರಭಾವಿ ಶಾಸಕನಿಗೆ ಹನಿಟ್ರಾಫ್ ಮಾಡಿ ಕೋಟ್ಯಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದ 10 ಮಂದಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಕಲ್ಪನಾ ಅಲಿಯಾಸ್ ಪುಷ್ಪಾ, ದಾವಣಗೆರೆಯ ರಾಘವೇಂದ್ರ, ಕಲ್ಪನಾ, ಮಂಡ್ಯದ ಮಂಜುನಾಥ, ಚಿಕ್ಕಬಳ್ಳಾಪುರದ ರಾಕೇಶ ಎಂದು ಗುರುತಿಸಲಾಗಿದೆ.

ಈ ಜಾಲದಲ್ಲಿ ಭಾಗಿಯಾಗಿದ್ದ ಹತ್ತಕ್ಕೂ ಹೆಚ್ಚು ಜನರನ್ನು ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಕಾಮಕ್ಕಾಗಿ ಮಾನ ಕಳಕೊಂಡ ಬಂಡೆಯಂತಹ ಶಾಸಕನನ್ನು ಈ ಖದೀಮರ ಜಾಲ ಯಾಮಾರಿಸಿತ್ತು.

ಪಂಚತಾರಾ ಹೋಟಲ್ ಗೆ ಕರೆಯಿಸಿ ಅಲ್ಲಿ ನಡೆದ ಕಾಮದಾಟದ ವೀಡಿಯೋ ಮಾಡಿದ್ದ ಆ ಮಹಿಳೆ ಹಾಗೂ ಆಕೆಯ ಸಹಚರರು ಅದನ್ನು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ವೈರಲ್ ಮಾಡಬಾರದು ಎಂದರೆ ಹದಿನೈದು ಕೋಟಿ ರೂಪಾಯಿ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದರು.

ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುವ ಬದಲಿಗೆ ಈ ವಿಷಯವನ್ನು ಆ ಶಾಸಕರು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತಂದಿದ್ದಾರೆ.

ತಕ್ಷಣ ಗೃಹ ಸಚಿವರು ಈ ವಿಷಯವನ್ನು ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ ಅವರಿಗೆ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸುವಂತೆ ಸೂಚಿಸಿದ್ದರು.

ಆಗ ಕಾರ್ಯಪ್ರವೃತ್ತರಾದ ಬೆಂಗಳೂರಿನ ಸಿಸಿಬಿ ಪೊಲೀಸರು ಈ ಹನಿಟ್ರಾಫ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರು ಕಳೆದ ಹಲವು ವರ್ಷಗಳಿಂದ ಹನಿಟ್ರಾಫ್ ದಂಧೆಯನ್ನು ನಡೆಸುತ್ತಿದ್ದರು. ಅನೇಕರು ಮಾನಕ್ಕೆ ಅಂಜಿ ಕೋಟ್ಯಾಂತರ ರೂಪಾಯಿ ಕಳೇದುಕೊಂಡಿದ್ದಾರೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿಚಾರಣೆ ನಡೆಸಿದ ವೇಳೆ ಈ ಖದೀಮರು ಉತ್ತರ ಕರ್ನಾಟಕ ಭಾಗದ ಪ್ರಭಾವಿ ಶಾಸಕನ ಜೊತೆಗೆ ಇಬ್ಬರು ಮಾಜಿ ಸಚಿವರಿಗೆ, ಹಲವು ಹಿರಿಯ ಅಧಿಕಾರಿಗಳಿಗೆ ಹಾಗೂ ಉದ್ಯಮಿಗಳಿಗೆ ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಆದರೂ ಈ ವೀಡಿಯೋ ಹಲವಡೆ ಹರಿದಾಡಿದ್ದು, ವೈರಲ್ ಮಾಡಿದವರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವೀಡಿಯೋ ವೈರಲ್ ಮಾಡಿದವರಿಗೂ ಹಾಗೂ ಹನಿಟ್ರಾಫ್ ಮಾಡಿದವರಿಗೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಅಲ್ಲದೆ, ಈ ವೀಡಿಯೋ ಉಪಚುನಾವಣೆಯ ವೇಳೇಯೇ ಹರಿದಾಡಲು ಕಾರಣವೇನು ಎಂಬುದನ್ನು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವೀಡಿಯೋವನ್ನು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗದಂತೆ ಶಾಸಕರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿರುವುದರಿಂದ ಅಷ್ಟೊಂದು ಸುದ್ದಿ ಆಗಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.

 

Please follow and like us:

Leave a Reply

Your email address will not be published. Required fields are marked *