ಬೆಂಗಳೂರು: ಹಿರಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ರಂಗಭೂಮಿ ತಜ್ಞ ಗಿರೀಶ್ ಕಾರ್ನಾಡ್ ಸೋಮವಾರ ಬೆಳಗ್ಗೆ ವಿಧಿವಶರಾದರು.
ಅವರಿಗೆ 79 ವರ್ಷ ವಯಸ್ಸಾಗಿತ್ತು. ಕಾರ್ನಾಡ್ ಅವರು ಕಳೆದ ಹಲವು ವರ್ಷಗಳಿಂದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು.
ಸೋಮವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಲ್ಯಾವೆಲ್ಲಿ ರೋಡ್ ನಲ್ಲಿರುವ ನಿವಾಸದಲ್ಲಿ ಕಾರ್ನಾಡ್ ಕೊನೆ ಉಸಿರೆಳೆದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಆಧರಿಸಿ ಪದ್ಮ ಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ರಂಗಭೂಮಿ, ಸಿನಿಮಾ ರಂಗದಲ್ಲಿ ಕೂಡ ನಟಿಸಿ, ಅಪಾರ ಜನ ಮನ್ನಣೆಯನ್ನು ಗಳಿಸಿದ್ದರು.
ಕಾರ್ನಾಡ್ ಅವರು 19 ಮೇ 1938ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದ್ದು, ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ನಂತರ ಧಾರವಾಡಕ್ಕೆ ಆಗಮಿಸಿದ್ದರು. ಧಾರವಾಡದ ಬಾಸೆಲ್ ಮಿಷನ್ ಪ್ರೌಢಶಾಲೆಯಲ್ಲಿ ಕಲಿತರು.
ಆನಂತರ ಕರ್ನಾಟಕ ಕಾಲೇಜ್ ನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದರು. ನಂತರ ಇಂಗ್ಲೆಂಡ್ಗೆ ತೆರಳಿದ ಅವರು ತತ್ವಶಾಸ್ತ್ರ ಅಧ್ಯಯನ ಮಾಡಿದರು. ಆಕ್ಸ್ಫರ್ಡ್ನಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಅಧ್ಯಯನ ನಡೆಸಿದರು.
ಕನ್ನಡದ ನೆಲದಲ್ಲಿ ಅದರಲ್ಲೂ ಧಾರವಾಡದಲ್ಲಿ ಬಾಲ್ಯ, ಯೌವ್ವನ ಕಳೆದಿದ್ದ ಕಾರ್ನಾಡ್ ಅವರು ಬರೆದ ತುಘಲಕ್, ಹಯವದನ, ತಲೆದಂಡ ಸೇರಿ ಸಾಕಷ್ಟು ನಾಟಕಗಳು ಅಪಾರ ಜನ ಮನ್ನಣೆ ಗಳಿಸಿವೆ. ಸಂಸ್ಕಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟ ಅವರು ಹಲವಾರು ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದರು.
ಟೈಗರ್ ಜಿಂದಾ ಹೈ ಮೂಲಕ ಸಲ್ಮಾನ್ ಖಾನ್ ಜೊತೆಗೆ ಅಭಿನಯಿಸಿದ್ದ ಗಿರೀಶ್ ಕಾರ್ನಾಡ್ ಅವರು ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಅವರ ಎ ಕೆ 47, ಜನ್ಮದಾತದಲ್ಲೂ ಪಾತ್ರ ಮಾಡಿದ್ದರು.
1970ರಲ್ಲಿಯೇ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಅವರು ವಂಶವೃಕ್ಷ, ಹಿಂದಿಯಲ್ಲಿ ಜಾದೂ ಕೀ ಶಂಖ್, 75ರಲ್ಲಿ ನಿಶಾಂತ್, 76ರಲ್ಲಿ ಮಂಥನ್, ಸ್ವಾಮಿ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಇತ್ತೀಚೆಗೆಷ್ಟೇ ಅವರು ಧಾರವಾಡದ ತಮ್ಮ ಹಳೆಯ ಮನೆಯನ್ನು ಮಾರಾಟ ಮಾಡಿದ್ದರು. ಧಾರವಾಡದ ಸಂಬಂಧವನ್ನು ಅವರು ಉಳಿಸಿಕೊಂಡಿದ್ದರು. ಕರ್ನಾಟಕ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಬಾಲ್ಯ, ಯೌವ್ವನದ ದಿನಗಳನ್ನು ಮೆಲಕು ಹಾಕಿದ್ದರು.