ಹಾಸನ : ಕನ್ನಡ ಚಿತ್ರರಂಗದ ಹಿರಿಯ ನಟ ದಿವಂಗತ ವಿಷ್ಣುವರ್ಧನ ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ವಿಷ್ಣುವರ್ಧನ ಅಳಿಯ ಹಾಗೂ ನಟ ಅನಿರುದ್ದ ಹೇಳಿರುವ ಉಡಾಫೆ ಮುಖ್ಯಮಂತ್ರಿ ಹೇಳಿಕೆಯಿಂದ ನನಗೆ ಬೇಸರ ವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಅವರು ಬುಧವಾರ ಹಾಸನದಲ್ಲಿ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ ಅವರ ಪ್ರಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿಷ್ಣುವರ್ಧನ ಅವರು ನಿಧನರಾದಾಗ ರಾಜ್ಯದಲ್ಲಿ ನಾನು ಅಧಿಕಾರದಲ್ಲಿರಲಿಲ್ಲ. ಆದರೂ ನನ್ನ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.
ಅಂಬರೀಶ್ ನಿಧನದ ವೇಳೆ ರಾಜ್ಯ ಸರಕಾರ ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆದುಕೊಂಡ ರೀತಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನ ಹಿಂದೆಯೇ ಕುಮಾರಸ್ವಾಮಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಒಂದು ಜವಾಬ್ದಾರಿಯುತ ಸರಕಾರವಾಗಿ ಕೆಲಸ ಮಾಡಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು ಅದರಲ್ಲೂ ನಟ ಅನಿರುದ್ದ ಅವರು ನಮಗೆ ಸಿಎಂ ನಾಲ್ಕು ಗಂಟೆ ಕಾಯಿಸಿದರೂ, ನಮಗೆ ಸಮಯ ಕೊಡಲಿಲ್ಲ ಎಂದು ಹೇಳಿದ್ದಿರಲ್ಲ. ನೀವು ಈ ರೀತಿ ಮಾತನಾಡಬೇಡಿ, ಯಾಕಂದ್ರೆ ನೀವು ನನ್ನ ಕೇಳಿ ಬಂದಿರಲಿಲ್ಲ ಎಂಬುದನ್ನು ಮರೆಯಬೇಡಿ ಎಂದು ಕುಟುಕಿದರು.
ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೆ ಆಗಲ್ಲ. ನನ್ನಿಂದ ತಪ್ಪಾಗಿಲ್ಲ. ಅಂಬರೀಶ್ ವಿಷಯದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದೇನೆ. ಹೊರತು ನಾನು ಉಡಾಫೆ ಮುಖ್ಯಮಂತ್ರಿಯಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ವಿಷ್ಣುವರ್ಧನ ಅವರು ನಿಧನ ಹೊಂದಿದ್ದಾಗ ನಾನೇ ಖುದ್ದು ಮನೆಗೆ ಭೇಟಿ ಮಾಡಿದ್ದಾಗ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ಒಪ್ಪಿಕೊಂಡಿದ್ದರು.
ನಾನೇ ಈ ವಿಷಯ ಪ್ರಸ್ತಾಪಿಸಿದ್ದೇನೆ.ವರನಟ ಡಾ. ರಾಜ್ ಕುಮಾರ ನಂತರ ವಿಷ್ಣುವರ್ಧನ ಬೆಳೆದಿದ್ದಾರೆ. ಬನಶಂಕರಿಯಲ್ಲಿ ಮಾಡಿದರೆ ಸರಿ ಹೊಂದಲ್ಲ ಎಂದು ಆಗ ನಟ ಅಂಬರೀಶ್ ಅವರಿಗೆ ಪೋನ್ ಮಾಡಿ ಹೇಳಿ ಸರಕಾರದ ಜೊತೆಗೆ ಸಂಪರ್ಕಿಸುವಂತೆ ಹೇಳಿದ್ದೆ.
ಸರಕಾರದಿಂದಲೇ ಸಕಲ ಗೌರವ ಕೊಡಬೇಕು ಎಂದು ಅಂದಿನ ಸರಕಾರದ ಮುಖ್ಯ ಕಾರ್ಯದರ್ಶಿ ಎಸ್. ವಿ ರಂಗನಾಥ್ ಹಾಗೂ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೋನ್ ಮಾಡಿ ಮನವಿ ಮಾಡಿದ್ದೆ. ಜೊತೆಗೆ ಅಂಬರೀಶ್ ಗೆ ಸಲಹೆ ಕೊಟ್ಟಿದೆ.
ವಿಷ್ಣುವರ್ಧನ ಅವರ ಸ್ಮಾರಕ ರಾಜ್ಯ ಸರಕಾರದಿಂದ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೆ. ಆದರೆ ಆಗಿನ ಬಿಜೆಪಿಯ ಬಿಎಸ್ ವೈ ಸರಕಾರ ಸ್ಪಂದಿಸಲಿಲ್ಲ.
ಅದನ್ನು ನನ್ನ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ನಟ ವಿಷ್ಣುವರ್ಧನ ವಿಚಾರದಲ್ಲಿ ಕೂಡ ನಾನು ಮುಕ್ತವಾಗಿ ಚರ್ಚೆ ಮಾಡಿ ನಿರ್ಧಾರ ಮಾಡ್ತಿನಿ. ಈಗಲೂ ನಿಮ್ಮೊಂದಿಗೆ ಮಾತುಕತೆಗೆ ಚರ್ಚೆಗೆ ಸಿದ್ದನಿದ್ದೇನೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ರಾಜ್ಯಕ್ಕಾಗಿ ದುಡಿದವರು ಸಾಕಷ್ಟು ಜನ ಇದ್ದರೂ ನಾವು ಯಾರದು ಸ್ಮಾರಕ ಮಾಡಿಲ್ಲ. ವಿಷ್ಣುವರ್ಧನ ಅವರು ನಟ ಅನ್ನೋ ಕಾರಣಕ್ಕೆ ಸರಕಾರದಿಂದ ಸ್ಮಾರಕಕ್ಕೆ ಒಪ್ಪಿಗೆ ಸೂಚಿಸಲಾಗಿದೆ.
ರಾಜ್ಯದ ಸಮ್ಮೀಶ್ರ ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ ವಿಷ್ಣುವರ್ಧನ ಸ್ಮಾರಕ ಮಾಡಲಿ ಎಂಬ ಪದ ಬಳಕೆ ಮಾಡಬೇಕಾದರೆ ಅದರ ಗಾಂರ್ಭೀರತೆ ಅರಿತುಕೊಳ್ಳಬೇಕು ಎಂದು ನಟ ಅನಿರುದ್ದಗೆ ಟಾಂಗ್ ನೀಡಿದರು.
ಅಲ್ಲದೆ, ಅವರಿಗೆ ಒಂದು ವಿಷಯ ಗೊತ್ತಿರಬೇಕು, ನಾನು ವಿಷ್ಣು ನಿಧನ ಹೊಂದಿದ್ದಾಗ ಅಧಿಕಾರದಲ್ಲಿರಲ್ಲಿಲ್ಲ ಎಂಬುದು ಎಂದು ಬೇಸರ ಹೊರ ಹಾಕಿದ್ದಾರೆ.