ಕೊಪ್ಪಳ : ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಎಲ್ಲಿ ಮಲಗ್ತಾರೆ ಅನ್ನೋದು ಖಾಸಗಿ ಸಂಗತಿ. ಅದನ್ನ ಯಡಿಯೂರಪ್ಪನವರು ಮಾತಾಡಬಾರದು. ಯಡಿಯೂರಪ್ಪ ಎಲ್ಲಿ ಮಲಗ್ತಾರೆ ಅಂತ ನಾವು ಹೇಳಬೇಕಾ? ಅದೆಲ್ಲ ಒಳ್ಳೇ ಬೆಳವಣಿಗೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಅವರು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಕ್ತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಯಡಿಯೂರಪ್ಪ ಏನ್ ಸತ್ಯ ಹರಿಶ್ಚಂದ್ರನಾ? ಪ್ರಾಮಾಣಿಕರಾ? ಅವರ ಕಾಲದಲ್ಲಿ ವರ್ಗಾವಣೆ ಆಗೇ ಇಲ್ವಾ? ಎಂದು ಪ್ರಶ್ನೆ ಮಾಡಿದರು.
ಕೊಪ್ಪಳ ಜಿಲ್ಲೆಗೆ ಶಿವರಾಜ ತಂಗಡಗಿ ಅಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಬಂದಿದ್ದೇನೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಇಡೀ ದಿನ ಬೇರು ಮಟ್ಟದಲ್ಲಿ ಪಕ್ಷ ಕಟ್ಟುವ ಕೆಲಸ ನಡೆಯಲಿದೆ ಎಂದು ಹೇಳಿದರು.
ರಿವ್ಯೂ ಮಾಡಿ,ಅಗತ್ಯ ಇದ್ದಲ್ಲಿ ಪದಾಧಿಕಾರಿಗಳನ್ನು ಬದಲಾವಣೆ ಮಾಡುತ್ತೇವೆ. ಆನಂದ್ ಸಿಂಗ್ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಗೊತ್ತಿಲ್ಲ. ವಿಚಾರಿಸ್ತಿನಿ ಎಂದರು.
ಪಕ್ಷ, ಸರಕಾರದ ಬಗ್ಗೆ ಯಾರೂ ಎಲ್ಲೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಮ್ಮೀಯ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್-ಜೆಡಿಎಸ್ ನಾಯಕರು ಒಗ್ಗಟ್ಟಾಗಿದ್ದೇವೆ ಎಂದರು.
ಡಿಸೆಂಬರ್ ೨೭ನೇ ತಾರೀಖು ರಾಜ್ಯದ ಸಚಿವ ಸಂಪುಟ ವಿಸ್ತರಣೆ ಆಗ್ತದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ಬರ ಪರಿಹಾರ ಕಾಮಗಾರಿಗಳನ್ನು ಸರಕಾರ ಉದಾಸೀನ ಮಾಡಿಲ್ಲ. ಎಲ್ಲಾ ಕಾರ್ಯಗಳು ನಡೀತಿವೆ. ಈಗಾಗಲೇ ಅನುದಾನ ಸಹ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಆಪರೇಷನ್ ಹಸ್ತ ಮಾಡುವ ಇರಾದೆ ನಮಗಿಲ್ಲ. ಬಿಜೆಪಿ ಬೋಗಸ್ ಪಟ್ಟಿ ಬಿಡುಗಡೆ ಮಾಡ್ತಿದೆ. ಬರೀ ಸುಳ್ಳು. ಸುಳ್ಳೇ ಬಿಜೆಪಿ ಜಾಯಮಾನ.
ಆಪರೇಷನ್ ನ ಬಿಜೆಪಿ ಪ್ರಯತ್ನ ನಿರಂತರವಾಗಿದೆ. ಅದು ಯಶಸ್ವಿಯಾಗಲ್ಲ ಎಂದು ಕುಟುಕಿದರು.