ಬೆಂಗಳೂರು prajakiran.com : ಅನಾಥ ಮಗುವಿಗೆ ಎದೆ ಹಾಲು ಉಣಿಸುವ ಮೂಲಕ ಮಹಿಳಾ ಪೊಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದಿರುವ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯ ಸಂಗೀತಾ ಹಳಿಮನಿ ಎಂಬ ಮಹಿಳಾ ಪೊಲೀಸ್ ಪೇದೆಯೇ ಅನಾಥ ಶಿಶುವಿಗೆ ಹಾಲುಣಿಸಿದ ಮಹಾತಾಯಿಯಾಗಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಉದ್ಯಾನವನದ ಬಳಿ ಅನಾಥ ಹೆಣ್ಣು ಮಗುವೊಂದು ಪತ್ತೆಯಾಗಿತ್ತು. ಕೂಡಲೇ ಅಲ್ಲೇ ಇದ್ದ ಸಿವಿಲ್ ಡಿಫೆನ್ಸ್ ಜನರು ಮಗುವನ್ನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಹಾಲು ಹಾಗೂ ಗ್ಲೂಕೋಸ್ ಇಲ್ಲದೆ ಮಗುವಿನ ಶಕ್ತಿ ಕುಂದಿದ್ದು, ಹೀಗಾಗಿ ಸ್ಥಳದಲ್ಲೆ ಇದ್ದ ಸಂಗೀತ ಕೂಡಲೇ ಮಗುವಿಗೆ ಹಾಲು ಉಣಿಸಿ ಸಾರ್ಥಕತೆ ಮೆರೆದಿದ್ದಾರೆ.
ಮಹಿಳಾ ಪೇದೆ ಸಂಗೀತಾ ಅವರ ಈ ಮಾನವೀಯ ಕಳಕಳಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವಾಣಿ ವಿಲಾಸ ಆಸ್ಪತ್ರೆಗೆ ಮಗುವನ್ನು ಶಿಫ್ಟ್ ಮಾಡಲಾಗಿದೆ. ಮಗುವಿನ ಆರೋಗ್ಯ ಸಂಪೂರ್ಣ ಸುಧಾರಣೆಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಮಗುವನ್ನು ವೈದ್ಯರು ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.