ಧಾರವಾಡ : ವಿದ್ಯಾನಗರಿ ಧಾರವಾಡದಲ್ಲಿ ಗೂಂಡಾಗಿರಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಡಜನ್ ಗೂ ಅಧಿಕ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರೂ, ಅವರ ಮನೆಯಲ್ಲಿ ಏನೂ ಸಿಗದೆ, ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ.
ಪಡ್ಡೆ ಹೈದರ ಪಟಾಲಂ ಕಟ್ಟಿಕೊಂಡು ಅಡ್ಡಾದಿಡ್ಡಿ ಅಡ್ಡಾಡುವ ರೌಡಿ ಶೀಟರ್ ಗಳಿಗೆ ಕಳೆದ ತಿಂಗಳಷ್ಟೇ ದಾಳಿ ನಡೆಸಿ, ಬಿಸಿ ತಾಕಿಸಿದ್ದ ಪೊಲೀಸರ ನಡೆಯಿಂದ ಸುಧಾರಿಸಿಕೊಳ್ಳದ ಅವರು ಸ್ಥಳೀಯ ಪೊಲೀಸ್ ವ್ಯವಸ್ಥೆಗೆ ಸೆಡ್ಡು ಹೊಡೆದು ತಮ್ಮ ಅಕ್ರಮ ದಂಧೆಗಳನ್ನು ಚುರುಕುಗೊಳಿಸಿದ್ದರು. ಅದರ ಸುಳಿವು ಪಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಮಂಗಳವಾರ 12 ರೌಡಿ ಶೀಟರ್ ಗಳಿಗೆ ಶಾಕ್ ನೀಡಿದ್ದಾರೆ.
ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಾದರಮಡ್ಡಿಯ ವಿಷ್ಣು ಕೊಂಡಪಲ್ಲಿ, ಸನ್ನಿ ಸಾಕೇತನ್, ಎಂ.ಆರ್. ನಗರದ ರಾಘವೇಂದ್ರ ವೇರ್ಣಿಕರ್, ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಾವೇರಿಪೇಟೆಯ ನಾಸೀರ್ ಶೇಖ್, ಕಂಠಿ ಗಲ್ಲಿಯ ಅಬ್ಬಾಬಾಷಾ ಜಾಫರ್ ಕಮಲ ಶಾ, ಹಳೆ ಎಪಿಎಂಸಿಯ ಪ್ರಕಾಶ ಶೆಟ್ಟಿ, ಗಬ್ಬಾ ರಫೀಕ್ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾನಂದ ನಗರದ ಮುಕ್ತುಮ ಸೊಗಲದ, ಪರಶುರಾಮ ಚವ್ಹಾಣ, ಹನುಮಂತ ನಗರದ ಮಂಜುನಾಥ ಹಿರೇಮನಿ, ಅತ್ತಿಕೊಳ್ಳದ ನರಸಿಂಹ ಅಲಿಯಾಸ್ ದೊಡ್ಡ ನರಸಿಂಹ ಮಾದರ ಹಾಗೂ ಶಿವಕುಮಾರ ಮಾದರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಬಿಸಿ ತಾಕಿಸಿದ್ದಾರೆ.
ದಾಳಿ ವೇಳೆ ವಿಷ್ಣು ಕೊಂಡಪಲ್ಲಿ ಮನೆಯಲ್ಲಿ 90 ಗ್ರಾಂ ಗಾಂಜಾ ದೊರೆತಿದ್ದು, ಬಿಟ್ಟರೆ ಇನ್ನುಳಿದವರ ಮನೆಯಲ್ಲಿ ಯಾವುದೇ ಅಕ್ರಮ ಶಸ್ತ್ರಾಸ್ತ್ರಗಳಾಗಲಿ, ಮಾರಕಾಸ್ತ್ರಗಳಾಗಲಿ ದೊರೆತಿಲ್ಲ ಎಂದು ಹುಬ್ಬಳ‍್ಳಿ-ಧಾರವಾಡ ಮಹಾನಗರ ಪೊಲೀಸ್ ಅಪರಾಧ ವಿಭಾಗದ ಉಪಆಯುಕ್ತ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.