ಧಾರವಾಡ prajakiran.com : ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಹಾಗೂ ರಾಜ್ಯದ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿಯನ್ನು ಪಡೆಯದೇ ಇರುವ ವಲಸೆ ಕಾರ್ಮಿಕ ಫಲಾನುಭವಿಗಳಿಗೆ ಹಾಗೂ ಪಡಿತರ ಚೀಟಿ ಹೊಂದದೇ ಇರುವ ಫಲಾನುಭವಿಗಳಿಗೆ ಮೇ ತಿಂಗಳಲ್ಲಿ ೫ ಕೆಜಿ ಅಕ್ಕಿಯನ್ನು ಮೇ ೨೬ ರಿಂದ ೩೧ ರವರೆಗೆ ವಿತರಿಸಲಾಗಿದೆ.
ಮೇ-೨೦೨೦ರ ತಿಂಗಳಲ್ಲಿ ಆಹಾರಧಾನ್ಯವನ್ನು ಪಡೆಯದ ವಲಸೆ ಕಾರ್ಮಿಕ ಫಲಾನುಭವಿಗಳು ಹಾಗೂ ಪಡಿತರ ಚೀಟಿ ಹೊಂದದೇ ಇರುವ ಪ್ರತಿ ಫಲಾನುಭವಿಗಳು ಜೂನ ತಿಂಗಳಲ್ಲಿ ಒಟ್ಟಿಗೆ ೧೦ ಕೆಜಿ ಅಕ್ಕಿ ಮತ್ತು ಕೇಂದ್ರ ಸರ್ಕಾರದ ಹಂಚಿಕೆಯಂತೆ ದಾಸ್ತಾನು ಲಭ್ಯತೆ ಪ್ರಮಾಣ ಅನುಸರಿಸಿ ಪ್ರತಿ ಕುಟುಂಬಕ್ಕೆ ೨ ಕೆಜಿ ಕಡಲೆಕಾಳನ್ನು ಪಡೆಯಬಹುದಾಗಿದೆ.
ಈ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಆಧಾರ್ ಸಂಖ್ಯೆ ನೀಡಿ ತಂತ್ರಾಂಶದಲ್ಲಿ ಯಾವುದೇ ಪಡಿತರ ಚೀಟಿಯನ್ನು ಹೊಂದಿಲ್ಲವೆಂಬುದು ಖಚಿತಗೊಂಡ ನಂತರವಷ್ಟೇ ನ್ಯಾಯಬೆಲೆ ಅಂಗಡಿಯವರಿಗೆ ಆಧಾರ್ ಓಟಿಪಿಯನ್ನು ನೀಡಿ ಪಡಿತರ ಪಡೆಯಬಹುದಾಗಿದೆ.
ವಲಸಿಗರಿಗೆ ಒದಗಿಸುವ ಸೌಲಭ್ಯಗಳನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಸೆಕ್ಷೆನ್ ೫೨ ರಡಿ ಅಡಿ ದಂಡ ಅಥವಾ ದಂಡದ ಜೊತೆಗೆ ೧ ವರ್ಷದಿಂದ ೨ ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಸಿದ್ದಾರೆ.
