ರಾಜ್ಯ

ಸುಗ್ನಹಳ್ಳಿ ಗ್ರಾಮ ವಾಸ್ತವ್ಯದಿಂದ ಹಲವು ಬದಲಾವಣೆ : ಕೋನರಡ್ಡಿ

ಗದಗ : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗ್ನಹಳ್ಳಿ ಯಲ್ಲಿ ೨೦೦೭ ರ ೨೮ ಫೆಬ್ರುವರಿಯಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮದ ರೈತ ಬಸವರಾಜ ಬಸಯ್ಯ ಹೊಂಬಾಳಿಮಠ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅದರಿಂದಾಗಿ ಇಡೀ ಗ್ರಾಮದ ಚಿತ್ರಣವೇ ಬದಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ತಿಳಿಸಿದರು.

ಅವರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ, ವಸ್ತು ಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮದ ಸಮಗ್ರ ಚಿತ್ರಣ ನೀಡಿದರು.

ಅಂದು ಗ್ರಾಮದಲ್ಲಿ ತಾಂಡವವಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಕುಮಾರಸ್ವಾಮಿಯವರು ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿ ಕೊರೆಸಿದ್ದರು. ಅಲ್ಲದೆ, ಮಗ್ಗಶೆಡ್ ಕಾಲೋನಿಯ ಶೆತ್ಕಿ ಜಮೀನಿನಲ್ಲಿ ವಿದ್ಯುತ್ ಕಂಬ ಹಾಕಿಸಿದ್ದಾರೆ. ಅದೇ ರೀತಿ, ಪೋತರಾಜ್ ಅವರ ಹೊಲದಲ್ಲಿ ಇರುವ ಮನೆಗಳಿಗೆ ವಿದ್ಯುತ್ ಕಂಬಗಳನ್ನು ಹಾಕಿಸಿ ವಿದ್ಯುತ್ ಸೌಲಭ್ಯ ಒದಗಿಸಿ ಹಲವು ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ.

ಇದರೊಂದಿಗೆ ಬೀರಪ್ಪನ ಗುಡಿಯಿಂದ ಶಾಲೆಯವರೆಗೆ ಸಿ.ಸಿ. ರಸ್ತೆಯನ್ನು ಮಾಡಿಸಲಾಗಿದೆ. ಸುಗ್ನಹಳ್ಳಿ ಗ್ರಾಮಕ್ಕೆ ಗುಡಿಸಲು ಮುಕ್ತ ಗ್ರಾಮ ಯೋಜನೆಯಡಿ ೫೦ ಮನೆಗಳ ನಿರ್ಮಾಣ ಮಾಡಲಾಗಿದೆ.

ಇದಲ್ಲದೆ ಸುಗ್ನಹಳ್ಳಿ ಗ್ರಾಮದಲ್ಲಿನ ಅರ್ಹ ಫಲಾನುಭವಿಗಳಿಗೆ ರೇಶನ್ ಕಾರ್ಡ, ವಿಧವಾ ವೇತನ, ಮಾಶಾಸನ, ಅಂಗವಿಕಲ ವೇತನ ಮತ್ತು ವೃದ್ದಾಪ್ಯ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸ್ಥಳದಲ್ಲಿಯೇ ವಿತರಿಸಲಾಯಿತು.

ಜಲಾನಯನ ಅಭಿವೃದ್ದಿ ಯೋಜನೆಯಡಿಯಲ್ಲಿ ಸುಗ್ನಹಳಿ ಗ್ರಾಮದ ಜಮೀನುಗಳಿಗೆ ಬದು ನಿರ್ಮಾಣ ಮಾಡಲು ಅನುಮತಿ ನೀಡಲಾಯಿತು. ಜಲಾನಯನ ಅಭಿವೃದ್ದಿ ಯೋಜನೆಯಡಿಯಲ್ಲಿ ಸುಗ್ನಹಳ್ಳಿ ಹಾಗೂ ಪಂಚಾಯಿತಿ ವ್ಯಾಪ್ತಿಯ ಹಳ್ಳಗಳಿಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಹೀಗೆ ಹಳ್ಳಿಗಳ ಜನರ ಜೀವನ ಮಟ್ಟ ಸುಧಾರಣೆಗೆ ಆದ್ಯತೆ ನೀಡಿದ್ದರಿಂದ ಗ್ರಾಮ ಅಭಿವೃದ್ದಿಯತ್ತ ದಾಪುಗಾಲು ಹಾಕಿದೆ ಎಂದು ಎನ್.ಹೆಚ್. ಕೋನರಡ್ಡಿ ಹೇಳಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಂದು ಗ್ರಾಮ ವಾಸ್ತವ್ಯ ಮಾಡಿದ್ದರಿಂದ ವಿಶೇಷ ಕಾಳಜಿವಹಿಸಿ, ಸುಗ್ನಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಕೃಷ್ಣಯ್ಯ ಅವರನ್ನು ಕಳುಹಿಸಿ ವರದಿ ತರಿಸಿಕೊಂಡು ೨೦೧೮-೧೯ನೇ ಸಾಲಿನಲ್ಲಿ ಆಲದಮ್ಮನ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಸದರಿ ಸಾಲಿನ ಬಜೆಟ್ ನಲ್ಲಿ ೧೦ ಕೋಟಿ ಘೋಷಣೆ ಮಾಡಿದ್ದಾರೆ.

ಅದೇ ರೀತಿ ೨೦೧೮-೧೯ನೇ ಸಾಲಿನಲ್ಲಿ ೩-೪ ಗ್ರಾಮಗಳ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇಂಗು ಕೆರೆ ನಿರ್ಮಾಣಕ್ಕೆ ಸುಗ್ನಹಳ್ಳಿ ಗ್ರಾಮದ ಹದ್ದಿನಲ್ಲಿರುವ ಮುಕ್ಕುಡ್ಡದ ಹತ್ತಿರ ಕೆರೆಗೆ ೧೧ ಕೋಟಿ ರೂ ಸಚಿವ ಸಂಪುಟದ ಅನುಮೋದನೆಗೆ ಮಂಡನೆಯಾಗಿರುತ್ತ್ತದೆ.

ಸುಗ್ನಹಳ್ಳಿ ಗ್ರಾಮದ ಸುಮಾರು ೨೫ಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಮಾನವೀಯತೆ ಮೆರೆದಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ವಿವರಿಸಿದರು.

ಸುಗ್ನಹಳ್ಳಿ ಗ್ರಾಮದ ಶ್ರಿÃ ವೀರಭದ್ರೆಶ್ವರ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಗಮನ ಹರಿಸಿ ಲೋಕಾರ್ಪಣೆಗೊಳಿಸಲಾಗಿದೆ. ಸರಕಾರ ರಚನೆ ಆಗಿ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಜಿಲ್ಲಾಡಳಿತ ಗ್ರಾಮಕ್ಕೆ ಭೇಟಿ ನೀಡಿ ಸುಗ್ನಹಳ್ಳಿ ಗ್ರಾಮದ ಹಳೆಯ ಬಾವಿ ನವೀಕರಿಸಿ ನೀರನ್ನು ಪೂರೈಸಿರುತ್ತಾರೆ.

ಗ್ರಾಮದ ಎಲ್ಲಾ ಜನರ ಕುಂದು ಕೊರತೆಗಳನ್ನು ಹಾಗೂ ಸಮಗ್ರ ಅಭಿವೃದ್ದಿ ಮಾಡುವುದಕ್ಕೆ ಮತ್ತು ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವರದಿಗಳನ್ನು ತರಿಸಿಕೊಂಡಿದೆ.

ಸುಗ್ನಹಳ್ಳಿ ಗ್ರಾಮದಲ್ಲಿ ಹಳೆಯ ವಿದ್ಯುತ್ ಕಂಬಗಳನ್ನು ತೆಗೆದು ಹೊಸ ಕಂಬಗಳನ್ನು ಬದಲಾವಣೆಗೊಳಿಸಲಾಗಿದೆ.ವಿಶೇಷ ಪ್ರಕರಣ ಅಂತ ಪರಿಗಣಿಸಿ ಸುಗ್ನಹಳ್ಳಿ ಗ್ರಾಮದಿಂದ ೨-೩ ಕಿಲೋ ಮೀಟರ್ ಅಂತರದಲ್ಲಿರುವ ಕೊಳವೆಬಾವಿಗಳಿಗೆ ನಿರಂತರ ವಿದ್ಯುತ್ ಪೂರೈಸಲಾಗಿದೆ.

ನೆಗಳೂರು ಅವರ ಶೆತ್ಕಿ ಜಮೀನಿನಲ್ಲಿ ಹೊಸದಾಗಿ ಸುಮಾರು ೩೦-೪೦ ವಿದ್ಯುತ್ ಕಂಬಗಳನ್ನು ಹಾಕಿಸಲಾಗಿದೆ. ಸುಗ್ನಹಳ್ಳಿ ಗ್ರಾಮವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಮುತುವರ್ಜಿವಹಿಸಿ ಅಭಿವೃದ್ದಿಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಅದನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ವಿವರಿಸಿದರು.

Please follow and like us:

Leave a Reply

Your email address will not be published. Required fields are marked *