ಲಕ್ನೋ (ಉತ್ತರಪ್ರದೇಶ) prajakiran.com : ಕಾನ್ಪುರದ 8 ಪೊಲೀಸರ ಸಾವಿಗೆ ಕಾರಣವಾಗಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಕೊನೆಗೂ ಉತ್ತರ ಪ್ರದೇಶ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.
ಶೋಲೆ ಸಿನಿಮಾದ ಗಬ್ಬರ್ ಸಿಂಗ್ ಮಾದರಿಯಲ್ಲಿ ಈತ ಜಂಗಲ್ ನ್ಯಾಯ ಮಾಡುತ್ತಿದ್ದ ಗಂಭೀರ ಆರೋಪ ಇತನ ಮೇಲಿತ್ತು. ಗ್ರಾಮಸ್ಥರು ಈತನ ಕಾಟ, ಕಿರುಕುಳದಿಂದ ಬೇಸತ್ತು ಹೋಗಿದ್ದರು. ಈಗ ಒಂದೊಂದಾಗಿ ಆತನ ಕರಾಳ ಮುಖಗಳು ಅನಾವರಣಗೊಳ್ಳುತ್ತಿವೆ.
ಕಳೆದ ಹಲವು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದ ಇತನನ್ನು ಸೆರೆ ಹಿಡಿಯಲು ಪೊಲೀಸರು ಬೆನ್ನು ಹತ್ತಿದ್ದರು.
ಆದರೆ ಅದು ಸಾಧ್ಯವಾಗಿರಲಿಲ್ಲ. ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳ ದೇವಸ್ಥಾನಕ್ಕೆ ಆಗಮಿಸಿ ವಿಐಪಿ ಪಾಸ್ ಮೂಲಕ ದೇವಿಯ ದರ್ಶನ ಮಾಡಿ ಹೊರ ಬರುತ್ತಿದ್ದ ವೇಳೆ ತಾನೂ ವಿಕಾಸ್ ದುಬೆ ಎಂದು ಅರಚಿಕೊಂಡಿದ್ದ.
ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದು ಆನಂತರ ಯುಪಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಕರೆದು ಕೊಂಡು ಬರುವಾಗ ಮಾರ್ಗ ಮಧ್ಯೆ ವಾಹನ ಅಪಘಾತವಾಗಿತ್ತು. ಈ ಸಂದರ್ಭದಲ್ಲಿ ಆತನ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಆತನ ಮೇಲೆ ಗುಂಡಿನ ಸುರಿ ಮಳೆ ಹರಿಸಲಾಗಿದೆ ಎಂದು ತಿಳಿದುಬಂದಿದೆ.
ಬುಧವಾರವಷ್ಟೇ ಆತನ ಆಪ್ತ ಅಮನ್ ದುಬೆ ಪೊಲೀಸರ ಗುಂಡಿಗೆ ಬಲಿಯಾಗಿದ್ದನೆ. ಈ ವೇಳೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದರು.
ಇದೇ ವೇಳೆ ಪೊಲೀಸ್ ದಾಳಿಯ ಮಾಹಿತಿ ನೀಡಿದ್ದ ಇಬ್ಬರು ಪೊಲೀಸರನ್ನು ಬಂಧಿಸಿರುವ ಯುಪಿ ಪೊಲೀಸರು ಇತನ ವಿರುದ್ದಅಂದಾಜು 60ಕ್ಕೂ ಹೆಚ್ಚು ಪ್ರಕರಣಗಳಿದ್ದು, 2001ರಲ್ಲಿಯೇ ಉತ್ತರ ಪ್ರದೇಶದ ಮಾಜಿ ಸಚಿವ ಸಂತೋಷ ಶುಕ್ಲಾ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪವಿದೆ ಎಂದು ಕಾನ್ಪೂರ ಪಶ್ಚಿಮ ಎಸ್ಪಿ ಅನಿಲಕುಮಾರ ತಿಳಿಸಿದ್ದಾರೆ.