ಬೆಂಗಳೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಗಾಳ ಹಾಕಿರುವ ಬಿಜೆಪಿಯ ಆಪರೇಶನ್ ಕಮಲ ಕ್ರೈಮಾಕ್ಸ್ ಹಂತಕ್ಕೆ ಬಂದು ತಲುಪಿರುವ ಬೆನ್ನಹಿಂದೆಯೇ ಅದರ ಇಂಚು ಇಂಚು ಮಾಹಿತಿಯನ್ನು ವಿಜಯನಗರ ಶಾಸಕ ಆನಂದ ಸಿಂಗ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಎದುರು ಹೊರ ಹಾಕಿದ್ದಾರೆ.
ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರು ಇದರ ಹಿಂದೆ ಇದ್ದು ಬಳ್ಳಾರಿ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದ್ದಾರೆ.
ಅದರೊಂದಿಗೆ ಮಸ್ಕಿ ಪ್ರತಾಪಗೌಡ ಪಾಟೀಲ, ಹಗರಿಬೊಮ್ಮನಳ್ಳಿ ಶಾಸಕ ಭೀಮಾನಾಯ್ಕ, ಯಲ್ಲಾಪುರ ಶಾಸಕ ಶಿಮರಾಮ್ ಹೆಬ್ಬಾರ, ಬಸವರಾಜ ದದ್ದಲ್, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಕಂಪ್ಲಿ ಶಾಸಕ ಜೆ.ಎನ್. ಗಣೇಶ, ಕಾಗವಾಡ ಶಾಸಕ ಶ್ರೀಮಂತಗೌಡ ಪಾಟೀಲ, ಅಥಣಿ ಶಾಸಕ ಮಹಾಂತೇಶ ಕುಮಟಳ್ಳಿ ಅವರನ್ನು ಕರೆದುಕೊಂಡು ಬರುವ ವಿಶ್ವಾಸ ಬಿಜೆಪಿ ನಾಯಕರಿಗೆ ನೀಡಿದ್ದಾರೆ.
ಆದರೆ ಅದರಲ್ಲಿ ಈಗಾಗಲೇ ಅರ್ಧದಷ್ಟು ಶಾಸಕರು ಹೆದರಿ ಕೈ ಕೋಟ್ಟಿದ್ದಾರೆ. ಆಪರೇಶನ ಕಮಲ ಈ ಬಾರಿಯೂ ಠುಸ್ ಪಟಾಕಿ ಆಗಲಿದೆ ಎಂದು ಆನಂದ ಸಿಂಗ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರಲ್ಲಿ ಈಗಾಗಲೇ ಯಲ್ಲಾಪುರ ಶಾಸಕ ವಿದೇಶ ಪ್ರವಾಸದಲ್ಲಿದ್ದರೆ, ಕಂಪ್ಲಿ ಶಾಸಕ ಜೆ.ಎನ್. ಗಣೇಶ, ಹಗರಿಬೊಮ್ಮನಳ್ಳಿ ಶಾಸಕ ಭೀಮಾ ನಾಯಕ್, ಬಸವರಾಜ ದದ್ದಲ್ ಕೈ ಕೊಟ್ಟಿದ್ದಾರೆ ಎಂದು ಆನಂದಸಿಂಗ್ ಹೈಕಮಾಂಡ್ ಎದುರು ಬಯಲು ಮಾಡಿದ್ದಾರೆ ಎನ್ನಲಾಗಿದೆ.
ಬಳ್ಳಾರಿಯ ನಾಲ್ಕು ಕಾಂಗ್ರೆಸ್ ಶಾಸಕರ ಸಂಪರ್ಕ ಸಾಧಿಸಲಾಗಿದ್ದು, ಜೆಡಿಎಸ್ ಇಬ್ಬರು ಶಾಸಕರಿಗೆ ಗಾಳ ಹಾಕಲಾಗಿದೆ. ಒಟ್ಟು ಹತ್ತಕ್ಕೂ ಹೆಚ್ಚು ಶಾಸಕರ ಮನವೊಲಿಸುವ ಕಸರತ್ತು ಮುಂದುವರೆದಿದೆ ಎಂದು ಆನಂದ ಸಿಂಗ್ ಆಪರೇಶನ ಕಮಲದ ಕುರಿತು ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.