ಧಾರವಾಡ: ವಿದ್ಯಾನಗರಿ ಧಾರವಾಡ ಜನತೆಯ ಬಹು ದಶಕಗಳ ಬೇಡಿಕೆಯಾಗಿದ್ದ ಆಟೋಗಳಿಗೆ ಮೀಟರ್ ಅಳವಡಿಕೆ ಕೊನೆಗೂ ಧಾರವಾಡ ಸಂಚಾರ ಪೊಲೀಸರು ಜಾರಿಗೊಳಿಸಿದ್ದು, ಇಂದಿನಿಂದ ಅಧಿಕೃತವಾಗಿ ಜಾರಿಯಾಗಿದೆ.
ಧಾರವಾಡ ಸಂಚಾರ ಪೊಲಿಸ್ ಠಾಣೆಯಲ್ಲಿ ಗುರುವಾರ ಪರೀಷ್ಕೃತ ಬಾಡಿಗೆ ದರ ಮತ್ತು ಮೀಟರ್ ಕಡ್ಡಾಯ ಅನುಷ್ಠಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಿದರು.
ಧಾರವಾಡದಲ್ಲಿ ಸುಮಾರು 4 ಸಾವಿರಕ್ಕಿಂತ ಹೆಚ್ಚಿನ ಆಟೋಗಳಿದ್ದು, ಈಗಾಗಲೇ ಶೇ. 90ರಷ್ಟು ಆಟೋಗಳಿಗೆ ದರ ಪಟ್ಟಿ ನೀಡಲಾಗಿದ್ದು, ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಪೊಲೀಸರಿಗೆ ಮಾಹಿತಿ ನೀಡಬಹುದು.
ಅಲ್ಲದೆ, ಮುಂದಿನ ವಾರದಿಂದ ಆರ್ ಟಿ ಓ ಅಧಿಕಾರಿಗಳ ಜೊತೆಗೆ ಸೇರಿ ತಪಾಸಣೆ ಕಾರ್ಯ ಆರಂಭಿಸಲಾಗುವುದು. ಯಾವುದೇ ಕಾರಣಕ್ಕೂ ಮೀಟರ್ ಕಡ್ಡಾಯ ಈ ಬಾರಿ ವಿಫಲ ಆಗಲು ಬಿಡುವುದಿಲ್ಲ. ಮೀಟರ್ ಅಳವಡಿಸಿಕೊಳ್ಳದಿದ್ದರೆ ಆಟೋಗಳನ್ನು ಸೀಜ್ ಮಾಡಲಾಗುವುದು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮುರುಗೇಶ ಚನ್ನಣ್ಣವರ ಎಚ್ಚರಿಸಿದ್ದಾರೆ.
ಆಟೋ ಮೀಟರ್ ಅಳವಡಿಕೆ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಡಿಸಿಪಿಗಳಾದ ರವೀಂದ್ರ ಗಡಾದೆ, ಬಿ.ಎಸ್. ನೇಮಗೌಡ, ಎಸಿಪಿ ಹೆಚ್.ಎಂ. ರುದ್ರಪ್ಪ, ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ, ಪೊಲೀಸ್ ಇನ್ಸ್ ಪೆಕ್ಟರ್ ಮುರುಘೇಶ ಚನ್ನಣ್ಣವರ ಸಾಥ್ ನೀಡಿದರು.