ಧಾರವಾಡ : ನಾನು ಮೂಲತಃ ನಾಸ್ತಿಕ. ದೇವರು, ಪುರಾಣಗಳ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮ ಮಂದಿರ ನಿರ್ಮಾಣದ ವಿಚಾರ ನನ್ನ ವ್ಯಾಪ್ತಿಯಲ್ಲಿ ಬರೋದಿಲ್ಲ. ವಾಲ್ಮೀಕಿ ಮುಂಚೆಯೂ ರಾಮಾಯಣದ ಕಥೆ ಇದೆ ಅಂತಾರೆ ಎಂದರು.
ನನ್ನ ಪಾಲಿಗೆ ಅದೊಂದು ಮಹಾಕಾವ್ಯ. ವಾಲ್ಮೀಕಿ ರಾಮಾಯಣ ಸಂಸ್ಕೃತ ಮೂಲದ್ದು. ಆದರೆ ಸಂಸ್ಕೃತ ನನಗೆ ಬರೋದಿಲ್ಲ. ಹೀಗಾಗಿ ನಾನು ವಾಲ್ಮೀಕಿ ರಾಮಾಯಣ ಓದಿಲ್ಲ ಎಂದರು.
ನಾನು ಕುವೆಂಪು ರಾಮಾಯಣ ಓದಿದ್ದೇನೆ. ನಮ್ಮಲ್ಲಿ ಒಟ್ಟು ೩೦೦ ರಾಮಾಯಣಗಳಿವೆ. ರಾಮ ದೇವರೋ, ಇತಿಹಾಸ ಪುರುಷನೋ ಅನ್ನೋದನ್ನು ಸಂಶೋಧಕರಿಗೆ ಬಿಡಬೇಕು. ಹೀಗಾಗಿ ಈ ವಿಚಾರ ನನ್ನ ವ್ಯಾಪ್ತಿಗೆ ಬರೋದಿಲ್ಲ ಎಂದರು.
ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಹೇಳಿಕೆಗೆ ಬೆಂಬಲ ನೀಡಿದರು. ಮೋದಿಯವರು ಕೋರ್ಟ್ ಆದೇಶ ಬಂದ ಮೇಲೆ ನೋಡೋಣ ಅಂದಿದ್ದಾರೆ. ಪ್ರಧಾನಿ ಹೇಳಿಕೆಗೆ ನನ್ನ ಬೆಂಬಲವಿದೆ ಎಂದರು.
ಪ್ರೊ. ಭಗವಾನ್ ಪುಸ್ತಕದಲ್ಲಿ ಶ್ರೀರಾಮನಿಗೆ ಅವಮಾನ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು ಅವೆಲ್ಲ ಹಳೆಯ ಬಾಂಬುಗಳು. ಪ್ರಜಾಪ್ರಭುತ್ವದ ಮುಖ್ಯ ಗುಣ ಪ್ರತಿರೋಧ. ಪ್ರಜಾಪ್ರಭುತ್ವದಲ್ಲಿ ವೈಚಾರಿಕ ವಿರೋಧಗಳಿರಬೇಕು ಎಂದು ಸಮರ್ಥಿಸಿಕೊಂಡರು.
ರಾಮಮಂದಿರ ಏಕೆ ಬೇಡ? ಹಳೆಯ ಪುಸ್ತಕ. ಇದೀಗ ಅದರ ಎರಡನೇ ಮುದ್ರಣ ಹೊರ ಬರುತ್ತಿದೆ. ಈಗ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ‘ಬೇಡ’ ಅನ್ನೋ ಪುಸ್ತಕ ಬರೆಯಲಾಗಿದೆ. ಅದನ್ನು ಎದುರಿಸಲು ‘ಏಕೆ ಬೇಕು?’ ಅನ್ನೋದನ್ನು ಬರೆಯಬೇಕು ಎಂದು ಸಲಹೆ ಮಾಡಿದರು.
‘ಏಕೆ ಬೇಕು?’ ಅನ್ನೋ ಪುಸ್ತಕ ಬರೆದು ಎದುರಿಸಲಿ. ಆಗ ಅದು ಪ್ರಜಾಪ್ರಭುತ್ವದ ಗುಣವೆನ್ನಿಸಿಕೊಳ್ಳುತ್ತದೆ ಎಂದರು.